ಭಾರತ: ಈ ದಿನವನ್ನು ಭಾರತದ ಇತಿಹಾಸದ ಪುಟದಲ್ಲಿ ಅಚ್ಚಳಿಯದ ದಿನವಾಗಿದೆ. ಭಾರತವು ತನ್ನ ನೌಕಾ ಸೇನೆಯಿಂದ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ್ದ ದಿನವಿದು. ಭೂ ಸೇನೆ, ವಾಯು ಸೇನೆ, ಜಲ ಸೇನೆ ಇವೆಲ್ಲವೂ ದೇಶದ ರಕ್ಷಣೆಗಾಗಿ ಹಗಲಿರುಳೆನ್ನದೆ ದೇಶದ ಗಡಿ ಸೇವೆಗಾಗಿ ಶ್ರಮಿಸುತ್ತಿವೆ.

ಅದರಂತೆ ನೌಕಾ ಪಡೆಯು ಕೂಡಾ ರಾಷ್ಟದ ರಕ್ಷಣೆಗಾಗಿ ಸದಾ ಸಿದ್ಧತೆಯಲ್ಲಿ. ಡಿಸೆಂಬರ್ 04 ನ್ನು ಪ್ರತಿವರ್ಷ ಭಾರತೀಯ ನೌಕಾ ದಿನವನ್ನಾಗಿ ಆಚರಿಸಲಾಗುತ್ತದೆ. 1971, ಡಿಸೆಂಬರ್ 4 ರಂದು ಪಾಕಿಸ್ತಾನಿ ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ, ಭಾರತೀಯ ನೌಕಾಪಡೆ ಪಿಎನ್ಎಸ್ ಖೈಬರ್ ಸೇರಿದಂತೆ ನಾಲ್ಕು ಪಾಕಿಸ್ತಾನಿ ಹಡಗುಗಳನ್ನು ಮುಳುಗಿಸಿ ನೂರಾರು ಪಾಕಿಸ್ತಾನಿ ನೌಕಾಪಡೆಯ ಸಿಬ್ಬಂದಿಗಳಿಗೆ ಮಣ್ಣು ಮುಕ್ಕಿಸಿತು.

ಪಾಕಿಸ್ತಾನಿ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಪಾತ್ರ ವಹಿಸಿದ ಕಾರಣಕ್ಕೆ ಈ ದಿನವನ್ನು ನೌಕಾದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ, 1971 ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲಾಗುತ್ತದೆ.

ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿದ್ದು, ಭಾರತದ ಅಧ್ಯಕ್ಷರು ಕಮಾಂಡರ್-ಇನ್-ಚೀಫ್ ಆಗಿ ಮುನ್ನಡೆಸುತ್ತಾರೆ. ಚೋಳ ಚಕ್ರವರ್ತಿ ರಾಜೇಂದ್ರರ ಅವರನ್ನು "ಭಾರತೀಯ ನೌಕಾಪಡೆಯ ಪಿತಾಮಹ" ಎಂದು ಪರಿಗಣಿಸಲಾಗಿದೆ.

ದೇಶದ ಸಮುದ್ರ ಗಡಿಗಳನ್ನು ಭದ್ರಪಡಿಸುವುದರ ಜೊತೆಗೆ ಬಂದರು ಭೇಟಿಗಳು, ಜಂಟಿ ವ್ಯಾಯಾಮಗಳು, ಮಾನವೀಯ ವಿಪತ್ತು ಪರಿಹಾರ ಇತ್ಯಾದಿಗಳ ಮೂಲಕ ಭಾರತದ ಅಂತರರಾಷ್ಟ್ರೀಯ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಭಾರತೀಯ ನೌಕಾಪಡೆಗೆ ಪ್ರಮುಖ ಪಾತ್ರವಿದೆ.

ಆಧುನಿಕ ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಸ್ಥಾನವನ್ನು ಸುಧಾರಿಸುವ ಸಲುವಾಗಿ ತ್ವರಿತ ನವೀಕರಣಕ್ಕೆ ಒಳಗಾಗಿದೆ. ಭಾರತೀಯ ನೌಕಾಪಡೆಯ ಬಲವು 67,000 ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಸುಮಾರು 150 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿದೆ.
ಈ ದಿನ ಭಾರತೀಯ ನೌಕಾಪಡೆಯ,ಎಲ್ಲ ಸಿಬ್ಬಂದಿಗಳಿಗೂ ಕೃತಜ್ಞತೆ ಅರ್ಪಿಸಲಾಗುತ್ತದೆ. ಭೋರ್ಗರೆವ ಕಡಲಲೆಯ ಮೇಲೆ, ಚಳಿ ಮಳೆ ಎನ್ನದೆ ಹೋರಾಡುವ ನೌಕಾಪಡೆಯ ಪ್ರತಿ ಸೈನಿಕರಿಗೂ ನಮ್ಮದೂ ನಮನವಿರಲಿ.
ದುರದುಂಡಯ್ಯಭಾವಿಮನಿ