ಶೇ. 82.70 ರಷ್ಟು ಎರಡನೇ ಹಂತದ ಗ್ರಾಪಂ ಮತದಾನ; ಡಿಸಿ ಎಮ್ ಜಿ ಹಿರೇಮಠ

  • 30 Dec 2023 , 4:13 AM
  • Belagavi
  • 132

ಬೆಳಗಾವಿ: ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆ ಭಾನುವಾರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದ್ದು, ಎರಡನೇ ಹಂತದಲ್ಲಿ ಒಟ್ಟಾರೆ ಶೇ.‌82.70 ರಷ್ಟು ಮತದಾನ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಚಿಕ್ಕೋಡಿ, ರಾಯಬಾಗ, ಅಥಣಿ, ಕಾಗವಾಡ, ನಿಪ್ಪಾಣಿ, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕುಗಳಲ್ಲಿ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದರು. ಜಿಲ್ಲೆಯ ಒಟ್ಟು 477 ಗ್ರಾಮ ಪಂಚಾಯಿತಿಗಳ ಚುನಾವಣೆ ನಡೆದಿದ್ದು, ಮೊದಲ ಹಂತದಲ್ಲಿ ಏಳು ತಾಲ್ಲೂಕುಗಳ 259 ಗ್ರಾಮ ಪಂಚಾಯಿತಿಗಳ ಮತದಾನ ಡಿ.22 ರಂದು ನಡೆದಿದೆ.

ಹಾಗೂ ಎರಡನೇ ಹಂತದಲ್ಲಿ ಏಳು ತಾಲ್ಲೂಕುಗಳಲ್ಲಿ ನಡೆದ ಚುನಾವಣೆಗೆ ಒಟ್ಟು 1789 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ನಿಪ್ಪಾಣಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮತದಾನ: ಎರಡನೇ ಹಂತದಲ್ಲಿ ಏಳು ತಾಲ್ಲೂಕುಗಳಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಮಾಹಿತಿಯ ಪ್ರಕಾರ ನಿಪ್ಪಾಣಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ ಶೇ.84.62 ರಷ್ಟು ಮತದಾನವಾಗಿದೆ. ಕಾಗವಾಡ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ‌ ಅಂದರೆ ಶೇ.80.95 ರಷ್ಟು ಮತದಾನವಾಗಿದೆ. ಏಳೂ ತಾಲ್ಲೂಕುಗಳ ಪೈಕಿ ಚಿಕ್ಕೋಡಿ(ಶೇ.84.53);

ರಾಯಬಾಗ(ಶೇ.82.52); ಅಥಣಿ(ಶೇ.81.32); ಕಾಗವಾಡ (ಶೇ.80.95); ನಿಪ್ಪಾಣಿ (ಶೇ.84.62); ರಾಮದುರ್ಗ(ಶೇ.81.33) ಮತ್ತು ಸವದತ್ತಿ (ಶೇ.82.60) ಮತದಾನವಾಗಿರುತ್ತದೆ. ಏಳು ತಾಲ್ಲೂಕುಗಳ ಒಟ್ಟು 11,59,813 ಮತದಾರರ ಪೈಕಿ 9,59,193 ಜನರು ಮತ ಚಲಾಯಿಸಿದ್ದಾರೆ. ಬೆಳಿಗ್ಗೆಯಿಂದಲೇ ಮತದಾನ ಚುರುಕಾಗಿತ್ತು. ಬೆಳಿಗ್ಗೆ 7 ರಿಂದ 9 ಗಂಟೆಯವರೆಗಿನ ಮೊದಲ ಎರಡು ಗಂಟೆಗಳ ಅವಧಿಯಲ್ಲಿ ಶೇ.8.27 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಬೆಳಿಗ್ಗೆ 9 ರಿಂದ 11 ಗಂಟೆಯ ಅವಧಿಯಲ್ಲಿ ಒಟ್ಟಾರೆ ಶೇ.24 ರಷ್ಟಾಗಿದ್ದ ಮತದಾನ ಪ್ರಮಾಣವು ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.45.13 ಕ್ಕೆ ಏರಿಕೆಯಾಯಿತು. ಹೀಗೆ ಬಿರುಸಿನಿಂದ ನಡೆದ ಮತದಾನವು ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.63.93 ರಷ್ಟಾಯಿತು.

ಸಂಜೆ 5 ಗಂಟೆಗೆ ಮತದಾನ ಕೊನೆಗೊಂಡಾಗ ಏಳು ತಾಲ್ಲೂಕುಗಳಲ್ಲಿ ಒಟ್ಟಾರೆ ಶೇ.82.70ರಷ್ಟು ಮತದಾನ ದಾಖಲಾಯಿತು. ಉಳಿದ ಏಳು ತಾಲ್ಲೂಕುಗಳಲ್ಲಿ ಡಿ.22 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.81.01ರಷ್ಟು ಮತದಾನವಾಗಿತ್ತು. ಒಟ್ಟಾರೆಯಾಗಿ ಜಿಲ್ಲೆಯ 14 ತಾಲ್ಲೂಕುಗಳಲ್ಲಿ ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದು. ಡಿ.30 ರಂದು ಫಲಿತಾಂಶ ಪ್ರಕಟವಾಗಲಿದೆ. ಆಯಾ ತಾಲ್ಲೂಕು ಕೇಂದ್ರಗಳಲ್ಲೇ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದ್ದಾರೆ.

Read All News