ಬೆಳಗಾವಿ: ಜಿಲ್ಲೆಯ ಎಲ್ಲ 14 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ಮತದಾನ ಮುಕ್ತಾಯಗೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟಗೊಳಿಸಲು ಸಿದ್ಧವಾಗಿದ್ದು, ನಾಳೆ ಬುಧವಾರ ದಿ 29 ರಂದು ಬೆಳಿಗ್ಗೆ 8 ರಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆ ಮಾಡಿದೆ ’ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಒಟ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಣದಲ್ಲಿದ್ದ 20,728 ಮಂದಿಯ ರಾಜಕೀಯ ಭವಿಷ್ಯವೇನು ಎನ್ನುವುದು ನಿರ್ಧಾರವಾಗಲಿದೆ. ತಲಾ 7 ತಾಲ್ಲೂಕುಗಳಲ್ಲಿ ಕ್ರಮವಾಗಿ ಒಂದು ಹಾಗೂ 2ನೇ ಹಂತದಲ್ಲಿ ಮತದಾನ ನಡೆದಿತ್ತು. 1ನೇ ಹಂತದಲ್ಲಿ ಶೇ 81.01 ಹಾಗೂ 2ನೇ ಹಂತದಲ್ಲಿ ಶೇ 83.16ರಷ್ಟು ಮತದಾನವಾಗಿತ್ತು. ಚಿಹ್ನೆ ಆಧಾರದ ಮೇಲೆ ಈ ಚುನಾವಣೆ ನಡೆದಿಲ್ಲವಾದರೂ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು.
ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರು ಅಥವಾ ಪಕ್ಷದ ಬೆಂಬಲಿಗರ ಪರವಾಗಿ ಪ್ರಚಾರ ಸಮಾವೇಶ ನಡೆಸಿದ್ದರು. ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಹೀಗಾಗಿ, ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಬೆಳಗಾವಿ ತಾಲ್ಲೂಕಿನ 55 ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕಾರ್ಯ ಬಿ.ಕೆ. ಮಾಡೆಲ್ ಶಾಲೆ ಆವರಣದ ಎನ್.ಎಸ್.ಪೈ. ಸ್ಮರಣಾರ್ಥ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ನಡೆಯಲಿದೆ. ‘ಅಭ್ಯರ್ಥಿ ಪರವಾಗಿ ನೇಮಿಸಿದ ಮತಗಳ ಎಣಿಕೆ ಏಜೆಂಟರು,
ಒಂದು ಗಂಟೆ ಮುನ್ನವೇ ನಿಗದಿತ ಸ್ಥಳದಲ್ಲಿ ಹಾಜರಾಗಬೇಕು. ಮಾಸ್ಕ್ ಧರಿಸುವುದು ಕಡ್ಡಾಯ. ಕೇಂದ್ರಕ್ಕೆ ಪ್ರವೇಶ ಬಯಸುವ ಎಲ್ಲರಿಗೂ ಕೋವಿಡ್-19 ಪರೀಕ್ಷೆ ಕಡ್ಡಾಯವಾಗಿದೆ. ಮುಖ್ಯ ದ್ವಾರದಲ್ಲಿ ವೈದ್ಯಾಧಿಕಾರಿಗಳಿಂದ ಪರೀಕ್ಷೆ ನಡೆಸಲಾಗುವುದು. ರೋಗ ಲಕ್ಷಣಗಳು ಕಂಡುಬಂದಲ್ಲಿ ಹೆಚ್ಚಿನ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದು ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಮಾಹಿತಿ ನೀಡಿದ್ದಾರೆ.
‘ಮತಗಳ ಎಣಿಕೆ ಕಾರ್ಯವನ್ನು ಪಂಚಾಯಿತಿವಾರು 120 ಟೇಬಲ್‌ಗಳಲ್ಲಿ ನಡೆಸಲಾಗುತ್ತಿದೆ. ಒಂದು ಪಂಚಾಯಿತಿ ಎಣಿಕೆ ಮುಗಿದ ನಂತರ ಒಳಗಡೆ ಇರುವ ಎಣಿಕೆ ಏಜೆಂಟರನ್ನು ಹೊರಗಡೆಗೆ ಕಳುಹಿಸಲಾಗುವುದು ಮತ್ತು ಬೇರೆ ಪಂಚಾಯಿತಿಯ ಎಣಿಕೆ ಕಾರ್ಯ ಪ್ರಾರಾರಂಭಿಸಿ, ಅದಕ್ಕೆ ಸಂಬಂಧಪಟ್ಟ ಎಣಿಕೆ ಏಜೆಂಟರ ಪ್ರವೇಶಕ್ಕೆ ಅನುಮತಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.