ಬೆಂಗಳೂರು: ನಗರದ ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಹರ್ಷಾನಂದಜೀ ಅವರು ಸ್ವಾಮಿ ವಿವೇಕಾನಂದ ಜನ್ಮದಿನದಂದೇ ವಿಧಿವಶರಾಗಿದ್ದಾರೆ. 91 ವರ್ಷ ವಯಸ್ಸಾಗಿದ್ದ ಅವರು ಇಂದು ಮಧ್ಯಾಹ್ನ 1.05 ರ ಸುಮಾರಿಗೆ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಮಠದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ಇವರು ರಾಮಕೃಷ್ಣ ಮಠದ ಅತ್ಯಂತ ಹಿರಿಯ ಸನ್ಯಾಸಿಯಾಗಿದ್ದರು. 1989 ರಲ್ಲಿ ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ರಾಮಕೃಷ್ಣ ಮಠದ ಆರನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರ ಶಿಷ್ಯರಾಗಿದ್ದರು. 1962 ರಲ್ಲಿ ಮಠದ 8 ನೇ ಅಧ್ಯಕ್ಷರಾಗಿದ್ದ ಸ್ವಾಮಿ ವಿಶುದ್ಧಾನಂದರಲ್ಲಿ ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿ, ಮಂಗಳೂರು, ಮೈಸೂರು, ಬೇಲೂರು ಮಠ ಮತ್ತು ಅಲ್ಲಹಾಬಾದ್ ರಾಮಕೃಷ್ಣ ಮಠಗಳಲ್ಲೂ ಕಾರ್ಯ ನಿರ್ವಹಿಸಿದ್ದರು.
ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಹಲವು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಅವರು ಕೆಲವು ಕೃತಿಗಳು ಫ್ರೆಂಚ್, ಕೊರಿಯನ್ ಮತ್ತು ಇಂಡೋನೇಷಿಯನ್ ಭಾಷೆಗಳಿಗೂ ಅನುವಾದಗೊಂಡಿದೆ.
ನಾಳೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂತಿಮ ಕ್ರಿಯೆ ನಡೆಯಲಿದ್ದು, ಇವರ ಅಂತಿಮ ದರ್ಶನಕ್ಕೆ ಇಂದು ಹಾಗೂ ನಾಳೆ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ವಿಷ್ಣುಮಯಾನಂದ ಸ್ವಾಮೀಜಿ ತಿಳಿಸಿದ್ದಾರೆ. ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.