ಬೆಳಗಾವಿ : ಬೆಳಗಾವಿ ನಗರದಲ್ಲಿರುವ ಗ್ರಾಹಕರ ಆಯೋಗದ ಕಟ್ಟಡ ಹಳೆಯದ್ದಾಗಿದ್ದು, ಅದನ್ನು ಜಿಪಂ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಮುನ್ನಡೆಸಿ ಶೀಘ್ರದಲ್ಲೇ ಸರಕಾರದೊಂದಿಗೆ ಮಾತುಕತೆ ನಡೆಸಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಹೇಳಿದರು.
ಶನಿವಾರ ಬಾರ್ ಅಸೋಸಿಯೇಷನ್ ಗೆ ಭೇಟಿ ನೀಡಿ ನ್ಯಾಯವಾದಿಗಳನ್ನು ಉದ್ದೇಶಿಸಿ ಮಾತನಾಡಿದರು. ಬೆಳಗಾವಿ ನಗರದಲ್ಲಿರುವ ಗ್ರಾಹಕರ ನ್ಯಾಯಾಲಯ ಬಹಳ ಹಳೆಯದ್ದಾಗಿದೆ. ಸದ್ಯ ಈಗ ಮಳೆಯಿಂದ ಛಾವಣಿ ಸೋರುತ್ತಿವೆ. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೇ ಕಟ್ಟಡ ನಿರ್ಮಾಣವಾಗಬೇಕಿತ್ತು. ಕಾರಣಾಂತರಗಳಿಂದ ಅದು ವಿಳಂಬವಾಗಿದೆ.

ಗ್ರಾಹಕರ ಸಂಚಾರಿ ನ್ಯಾಯಪೀಠವನ್ನು ಬೆಳಗಾವಿ ಹಾಗೂ ಧಾರವಾಡದಲ್ಲಿ ನಿರ್ಮಾಣ ಮಾಡಲು ಸರಕಾರ ಚಿಂತನೆ ನಡೆಸಲಾಗುತ್ತಿದೆ ಎಂದರು. ಬೆಳಗಾವಿ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಅಭಿವೃದ್ಧಿಯಾಗುತ್ತಿದೆ.
ನ್ಯಾಯವಾದಿಗಳು ನೀಡಿರುವ ಸಲಹೆಯನ್ನು ಸಿ ಎಂ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚೆ ಮಾಡಿ ಈಡೇರಿಸುವುದಾಗಿ ಭರವಸೆ ನೀಡಿದರು. ನ್ಯಾಯವಾದಿ ಎಂ.ಬಿ.ಜೀರಲಿ ಮಾತನಾಡಿ, ಗ್ರಾಹಕರು ಹಾಗೂ ನ್ಯಾಯವಾದಿಗಳಿಗೆ ಅನಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ನ್ಯಾಯ ಪೀಠ ಸ್ಥಾಪನೆ ಮಾಡುವಂತೆ ವಿನಂತಿಸಿಕೊಂಡರು.

ರಾಜ್ಯದ ಹಲವಾರು ಇಲಾಖೆಗಳು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಕೆಲಸವನ್ನು ಆದಷ್ಟು ಬೇಗ ಮಾಡಬೇಕು. ಇದಕ್ಕೆ ಬೆಳಗಾವಿ ಬಾರ್ ಅಸೋಸಿಯೇಷನ್ ನ ನ್ಯಾಯವಾದಿಗಳು ಸಹ ಬೆಂಬಲ ನೀಡುವುದಾಗಿ ಹೇಳಿದರು.
ನ್ಯಾಯವಾದಿ ಎನ್.ಆರ್.ಲಾತೂರ್ ಮಾತನಾಡಿ, ಬೆಳಗಾವಿಯಲ್ಲಿ ಗ್ರಾಹಕರ ಕಟ್ಟಡ ಸಮಸ್ಯೆಯಿಂದ ಕಳೆದ 10 ವರ್ಷಗಳಿಂದ ಸರಿಯಾಗಿ ವ್ಯಾಜ್ಯಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ. ಶೀಘ್ರವೇ ಇದಕ್ಕೆ ಮುಕ್ತಿ ನೀಡಬೇಕೆಂದರು. ರಾಜ್ಯ ಗ್ರಾಹಕರ ನ್ಯಾಯಾಲಯದ ಸಂಚಾರಿ ಪೀಠ ನಿರ್ಮಾಣ ಮಾಡಿದರೆ ನಮ್ಮ ಭಾಗಕ್ಕೆ ಅನಕೂಲವಾಗುತ್ತದೆ.
ಈಗಾಗಲೇ ರಾಜ್ಯ ಸರಕಾರಕ್ಕೆ ಶಿಪಾರಸ್ಸು ಮಾಡಲಾಗಿದೆ. ಇಲ್ಲಿರುವ ನ್ಯಾಯಾಲಯ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಸ್ವತಃ ಕಟ್ಟಡ ನಿರ್ಮಾಣ ಮಾಡಲು ಸಚಿವರು ಕೈ ಜೊಡಿಸಬೇಕೆಂದು ಹೇಳಿದರು.
ನ್ಯಾಯವಾದಿಗಳಾದ ಮುತಾಲಿಕ ದೇಸಾಯಿ, ಹನುಮಂತ ಕೊಂಗಾಲಿ, ಆರ್ ಸಿ. ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.