ಸವಿತಾ ಸಮಾಜದ ಸಮುದಾಯ ಭವನಕ್ಕೆ ಜಮೀನು: ಶಾಸಕ‌ ಬೆನಕೆ ಭರವಸೆ

  • 30 Dec 2023 , 6:03 AM
  • Belagavi
  • 91

ಬೆಳಗಾವಿ:ಉತ್ತಮ​​​​​​ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಂದು ಸಮಾಜವು ಶಿಕ್ಷ ಣಕ್ಕೆ ಒತ್ತು ನೀಡಬೇಕು. ಎಲ್ಲ ಸಮಾಜಗಳು ಒಗ್ಗೂಡಿ ಪ್ರಗತಿ ಸಾಧಿಸಬೇಕು ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಬಸವರಾಜ ಕಟ್ಟಿಮನಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಸವಿತಾ ಸಮಾಜ ಸದೃಢವಾಗಬೇಕು. ಅವರವರ ಕಸುಬಿನ ಮೇಲೆ ಗೌರವ, ನಿಷ್ಠೆ ಇಟ್ಟುಕೊಂಡಾಗ ಬದುಕಿನಲ್ಲಿ ಉತ್ತುಂಗಕ್ಕೇರಲು ಸಾಧ್ಯವಾಗಲಿದೆ.

ಸರಕಾರದ ಸೌಲಭ್ಯಗಳನ್ನು ಪಡೆಯಲು ಈ ಸಮುದಾಯ ಮುಂದೆ ಬರುತ್ತಿಲ್ಲವಾದ್ದರಿಂದ ಸಮುದಾಯಕ್ಕೆ ಸಿಗಬೇಕಿರುವ ಸೌಲಭ್ಯಗಳು ಪರರ ಪಾಲಾಗುತ್ತಿವೆ. ಮುಂದಿನ ದಿನಗಳಲ್ಲಿ ಸರಕಾರದ ಸೌಲಭ್ಯಗಳನ್ನು ಬಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.

ಸವಿತಾ ಸಮುದಾಯದ ಭವನಕ್ಕೆ ಸರಕಾರದಿಂದ ಜಮೀನು ಮಂಜೂರು ಮಾಡಿಸಿಕೊಡಲಾಗುವುದು. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ಜಯಂತಿಯನ್ನು ಆಚರಿಸಬೇಕು ಎಂದು ಶಾಸಕ ಅನಿಲ್ ಬೆನಕೆ ಹೇಳಿದರು. ಉಪ ವಿಭಾಗಾಧಿಕಾರಿ ಅಶೋಕ ತೇಲಿ ಹಾಗೂ ಸವಿತಾ ಸಮುದಾಯದ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಎಚ್ ಭಜಂತ್ರಿ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Read All News