ಜಂಗಮ ಸೌಲಭ್ಯ ಪಡೆದು ಜಂಗಮರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವಚನಾನಂದ ಸ್ವಾಮೀಜಿ ವಿರುದ್ದ ಕ್ರಮಕ್ಕೆ ಆಗ್ರಹ

  • 14 Jan 2024 , 10:48 PM
  • Belagavi
  • 99

ಬೆಳಗಾವಿ:ಹರಿಹರ ಪೀಠದ ಪಂಚಮಸಾಲಿ ವಚನಾನಂದರು ಜಂಗಮ ಸಮಾಜದ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದನ್ನು ಖಂಡಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ ಚನ್ನಮ್ಮ ವೃತ್ತದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ರವಾನಿಸಿದರು.

ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಲ್ಲಿ ಜಂಗಮ ಸಮಾಜ ಮತ್ತು ಅವರ ವೃತ್ತಿಯನ್ನು ಕುರಿತು ಕೆಲವು ಅವಹೇಳನಕಾರಿ ಶಬ್ದಗಳನ್ನು ಬಳಸಿ ಹಗುರವಾಗಿ ಮಾತನಾಡಿದ್ದನ್ನು ಮನವಿಯಲ್ಲಿ ಖಂಡಿಸಿದ್ದಾರೆ.

ವಚನಾನಂದರು ಭಿನ್ನಾ ತೀರಿಸೋ ಸ್ವಾಮೀಗಳ ಬಗ್ಗೆ ಏನು ಮಾತನಾಡುವುದು ? ದಕ್ಷಿಣೆ ಕೇಳುವ ಸ್ವಾಮೀಗಳ ಬಗ್ಗೆ ಏನು ಮಾತನಾಡುವುದು ? ಎಂದು ಅವಹೇಳನಕಾರಿ ಹೇಳನಕಾರಿ ಶಬ್ದಗಳಿಂದ ನಿಂದಿಸಿದ್ದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಹರ ಪೀಠದ ವಚನಾನಂದರು ವಿದ್ಯಾರ್ಥಿ ಜೀವನದಲ್ಲಿ ಜಂಗಮ ದಾಸೋಹದಿಂದ ಬಂದ ಪ್ರಸಾದವನ್ನು ಸ್ವೀಕರಿಸಿ ಬೆಳೆದು ದೊಡ್ಡವರಾದವರು ಎನ್ನುವುದನ್ನು ಮರೆಯಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಂಗಮ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿರುವ ಅವರ ಹೇಳಿಕೆಯನ್ನು ಹಿಂಪಡೆದು ನಮ್ಮ ಸಮುದಾಯದ ಭಾವನೆಗಳಿಗೆ ಗೌರವ ತರುವ ರೀತಿಯಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಸಂವಿಧಾನಾತ್ಮಕವಾಗಿ ಯಾವುದೇ ಒಂದು ಕೋಮಿನ ಕುರಿತು ಹಗುರವಾಗಿ ಮಾತ‌ನಾಡುವುದು ಕಾನೂನು ಬಾಹಿರವಾಗುತ್ತದೆ. ಇವರ ಹೇಳಿಕೆಯನ್ನು ಕಾನೂನಿನ್ವಯ ಪ್ರಕರಣ ದಾಖಲಿಸಿಕೊಂಡು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಹಾಂತೇಶ ರಣಗಟ್ಟಿಮಠ, ಚಾಮರಾಜ ಸಾಲಿಸವಡಿಮಠ, ವೀರುಪಾಕ್ಷಯ್ಯ ನೀರಲಗಿಮಠ, ಮಹಾಂತೇಶ ಶಾಸ್ತ್ರೀ, ವಿಜಯ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News