ಬೆಳಗಾವಿ ಮಹಾನಗರ ಪಾಲಿಕೆಯ 2021-22 ನೇ ಸಾಲಿನ ಆಯವ್ಯಯದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಮೀಸಲಿಟ್ಟಿರುವ 25 ಲಕ್ಷ ರೂಪಾಯಿ ಅನುದಾನ ಬಳಕೆಗೆ ಪತ್ರಕರ್ತರು ನೀಡಿರುವ ಸಲಹೆಗಳನ್ನು ಆಧರಿಸಿ ಸ್ಪಷ್ಟ ಮಾರ್ಗಸೂಚಿ ರಚಿಸಲಾಗುವುದು ಎಂದು ಪಾಲಿಕೆಯ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಬಳಕೆಗೆ ಸಂಬಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ಹಿನ್ನೆಲೆಯಲ್ಲಿ ಹಾಗೂ ನಿಧಿ ಬಳಕೆಗೆ ಮಾರ್ಗಸೂಚಿ ಇಲ್ಲದಿರುವುದರಿಂದ ಕಳೆದ ಸಾಲಿನ ಅನುದಾನ ಬಳಕೆ ಮಾಡುವುದು ಸಾಧ್ಯವಾಗಿರುವುದಿಲ್ಲ. ಆದ್ದರಿಂದ ಈ ಬಾರಿ ವರ್ಷದ ಆರಂಭದಲ್ಲಿಯೇ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗಿದೆ.
ಪತ್ರಕರ್ತರ ಆಶಯದಂತೆ ಕ್ಷೇಮಾಭಿವೃದ್ಧಿ ನಿಧಿ ಬಳಕೆಗೆ ಮಾರ್ಗಸೂಚಿ ರೂಪಿಸಲಾಗುವುದು ಎಂದರು. ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಮೆಹಬೂಬ್ ಮಕಾನದಾರ, ರಾಜ್ಯಮಟ್ಟದ ಪತ್ರಿಕೆಗಳ ಸಿಬ್ಬಂದಿಗೆ ನೇಮಕಾತಿ ಪತ್ರ ಹಾಗೂ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡ್ ಆಧರಿಸಿ ಹಾಗೂ ಸ್ಥಳೀಯ ಪತ್ರಿಕೆಗಳ ಸಿಬ್ಬಂದಿಗೆ ಆಯಾ ಸಂಸ್ಥೆಯ ಶಿಫಾರಸ್ಸು ಪತ್ರ ಆಧರಿಸಿ ಸೌಲಭ್ಯ ನೀಡಬೇಕು ಎಂದರು.
ಪತ್ರಕರ್ತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರವೇಶ ಶುಲ್ಕ, ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವು ಹಾಗೂ ಪತ್ರಕರ್ತರ ಹೆಣ್ಣುಮಕ್ಕಳ ಮದುವೆಗೆ ಧನಸಹಾಯ ನೀಡಬೇಕು ಎಂದು ಸಲಹೆ ನೀಡಿದರು. ಮಹೇಶ್ ಎಂ., ಮಾತನಾಡಿ, ಒಟ್ಟು 25 ಲಕ್ಷ ರೂಪಾಯಿ ಅನುದಾನದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ವಿವಿಧ ವಿಭಾಗದಲ್ಲಿ ಪ್ರಶಸ್ತಿ ನೀಡಲು ಒಂದು ಲಕ್ಷ ಅನುದಾನ ಬಳಕೆ ಮಾಡಬೇಕು.
ಮಹಿಳಾ ಸಿಬ್ಬಂದಿಗೂ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದರು. ಮುರುಗೇಶ ಶಿವಪೂಜಿ ಮಾತನಾಡಿ, ನಗರದಲ್ಲಿ ಪತ್ರಿಕಾ ಭವನ ನಿರ್ಮಾಣ ಆಗಬೇಕು ಎಂದರು.ಇದಲ್ಲದೇ ವರದಿಗಾರರು, ಉಪ ಸಂಪಾದಕರು, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಜತೆಗೆ ಕಚೇರಿಯ ಸಿಬ್ಬಂದಿ ಕೂಡ ಇದರ ವ್ಯಾಪ್ತಿಗೆ ಬರಬೇಕು.
ತಂದೆ-ತಾಯಿ ಸೇರಿದಂತೆ ಕುಟುಂಬದ ಸದಸ್ಯರಿಗೆ ಇದರ ಪ್ರಯೋಜನ ಸಿಗಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಮಾತನಾಡಿದ ಪತ್ರಕರ್ತ ಶ್ರೀಶೈಲ್ ಮಠದ ಅವರು, ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅನುದಾನ ಮೀಸಲಿಟ್ಟಿರುವ ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆಯ ಆಯುಕ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಸೌಲಭ್ಯ ದೊರೆಯಬೇಕು.
ಅಪಘಾತದಲ್ಲಿ ಮೃತಪಟ್ಟ ಕಾರ್ಯನಿರತ ಪತ್ರಕರ್ತರ ಅವಲಂಬಿತ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸಲಹೆ ನೀಡಿದರು. ಪ್ರತಿಭಾವಂತರಿಗೆ ಪ್ರೋತ್ಸಾಹಿಸಬೇಕು ಹಾಗೂ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ರಾಯಣ್ಣ, ಚೆನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ಸಭೆಯಲ್ಲಿ ಸಲಹೆ ನೀಡಿದರು.
ಮಹಾನಗರ ಪಾಲಿಕೆಯ ಅನುದಾನ ಆದ್ದರಿಂದ ಇದು ಬೆಳಗಾವಿ ನಗರದ ವರದಿಗಾರರಿಗೆ ಮಾತ್ರ ಸೀಮಿತವಾಗಿ ನಿಧಿ ಬಳಕೆಯಾಗಬೇಕು ಎಂದು ಪತ್ರಕರ್ತ ರಾಜಶೇಖರಯ್ಯ ಹಿರೇಮಠ ಹೇಳಿದರು. ಪತ್ರಿಕಾಭವನಕ್ಕೆ ಅನುದಾನ ಬಳಕೆ ಮಾಡಬೇಕು ಎಂದು ಚಂದ್ರಕಾಂತ ಸುಗಂಧಿ ಸಲಹೆ ನೀಡಿದರು. ಸಂಸ್ಥೆಯಿಂದ ಆರೋಗ್ಯ ವಿಮೆ ಇತುತ್ತದೆ. ಅದರ ಜತೆಗೆ ಕುಟುಂಬಕ್ಕೆ ಅನುಕೂಲ ಕಲ್ಪಿಸಬೇಕು ಸುನಿಲ್ ಪಾಟೀಲ ತಿಳಿಸಿದರು. ಪತ್ರಿಕೋದ್ಯಮ ವೃತ್ತಿಗೆ ಅನುಕೂಲವಾಗುವಂತಹ ಪರಿಕರಗಳ ಖರೀದಿಗೆ ಧನಸಹಾಯ ಒದಗಿಸಬೇಕು ಎಂದು ನಾಗರಾಜ್ ಸಲಹೆ ನೀಡಿದರು.
ಮಾನ್ಯತಾ ಗುರುತಿನಚೀಟಿ ಮೂಲ ಆಧಾರವಾಗಿಟ್ಟುಕೊಳ್ಳಬೇಕು ಎಂದು ಶ್ರೀಧರ್ ಹೇಳಿದರು. ಛಾಯಾಗ್ರಾಹಕರಿಗೂ ಆದ್ಯತೆ ನೀಡಬೇಕು ಎಂದು ಸಂಕಪ್ಪಗೋಳ ತಿಳಿಸಿದರು. ಪತ್ರಿಕಾಲಯಕ್ಕೆ ಕೈಗಾರಿಕಾ ನಿವೇಶನ ನೀಡಲು ಸುರೇಶ್ ಟೋಪಣ್ಣವರ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್., ಮಾರ್ಗಸೂಚಿ ಇಲ್ಲದಿರುವುದರಿಂದ ಅನುದಾನ ಬಳಕೆ ಸಾಧ್ಯವಾಗಿರಲಿಲ್ಲ.
ಆದ್ದರಿಂದ ಪತ್ರಕರ್ತರ ಸಲಹೆ ಆಧರಿಸಿ ಪ್ರಸಕ್ತ ಸಾಲಿನಲ್ಲಿ ಅನುದಾನ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ, ಪತ್ರಕರ್ತರ ಸಲಹೆಗಳ ಮೇರೆಗೆ ಮಾರ್ಗಸೂಚಿ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು. ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.