ಬೆಂಗಳೂರು :ಕೋವಿಡ್-19 ಆರ್ಥಿಕ ಸಂಕಷ್ಟದ ನಡುವೆಯೂ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸಿದವರಿಗೆ ಧನ್ಯವಾದ ಹೇಳಿದರು. ಅಲ್ಲದೆ ಮಹದಾಯಿ ಯೋಜನೆಗೆ 1677 ಕೋಟಿ ಸೇರಿದಂತೆ ಬೆಳಗಾವಿಗೆ ಬಂಪರ್ ಕೊಡುಗೆ ನೀಡಿದ್ದಾರೆ.
ಕೊರೊನಾ ಲಾಕ್ ಡೌನ್ ಕಾರಣದಿಂದಾಗಿ ಆರ್ಥಿಕ ವರ್ಷ ಮೊದಲ ಮೂರು ತಿಂಗಳು ರಾಜಸ್ವ ಸಂಗ್ರಹ ಇಳಿಕೆಯಾಗಿದೆ. ಆದರೆ ಈಗ ರಾಜ್ಯದಲ್ಲಿ ಅಹಾರ ಉತ್ಪಾದನೆಯಲ್ಲಿ ನೂತನ ದಾಖಲೆ ನಿರ್ಮಿಸಿರುವುದು ಸಂತಸದ ಸಂಗತಿ ಎಂದರು. ಕೊರೊನಾ ಕಾರಣದಿಂದಾಗಿ ಸಾಕಷ್ಟು ನಷ್ಟ ಉಂಟಾಗಿದ್ದು, ಕೈಗಾರಿಕಾ ವಲಯ ಶೇ.51 ಹಾಗೂ ಸೇವಾ ವಲಯ ಶೇ.3.1 ಇಳಿಕೆ.
ಕೃಷಿ ಕ್ಷೇತ್ರದಲ್ಲಿ ಶೇ.6.4ರಷ್ಟು ಬೆಳವಣಿಗೆ ಕಂಡಿದೆ. ಜಿಡಿಪಿಗೆ ಶೇ.8ರಷ್ಟು ಕರ್ನಾಟಕದ ಕೊಡುಗೆ ಇದೆ ಎಂದು ಹೇಳಿದರು. ಬಜೆಟ್ ಗಾತ್ರ 2 ಲಕ್ಷದ 43ಸಾವಿರದ 734 ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಬಜೆಟ್ ಮಂಡಿಸಲಾಗುತ್ತಿದೆ. ಬಜೆಟ್ ನಲ್ಲಿ ಮಠಗಳಿಗೂ ಅನುದಾನ ಬಿಡುಗಡೆ ಮಾಡಲಾಗಿದೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ, ಇಂಗಳೇಶ್ವರ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣ ಜನ್ಮಸ್ಥಳ ಅಭಿವೃದ್ಧಿಗೆ 5 ಕೋಟಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಕೊಲ್ಲಾಪುರಿ ಪಾದರಕ್ಷೆಯ ಕ್ಲಸ್ಟರ್ ನಿರ್ಮಾಣ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ. ರು. ಮೀಸಲು, ಬೆಳಗಾವಿ, ಕಿತ್ತೂರು ಮಾರ್ಗವಾಗಿ ಧಾರವಾಡದ ರೈಲ್ವೆ ಯೋಜನೆಗೆ 463 ಕೋಟಿ. ರು., ಝಾಡ್ ಶಹಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 104 ಕೋಟಿ ರು. ರಿಂಗ್ ರಸ್ತೆ ನಿರ್ಮಾಣಕ್ಕೆ 140 ಕೋಟಿ ರು. ಮೀಸಲಿಟ್ಟಿದ್ದು, ನೀರಾವರಿ ಇಲಾಖೆಗೂ ಭರ್ಜರಿ ಕೊಡುಗೆ ನೀಡಿದ್ದಾರೆ.