ಬೆಂಗಳೂರು: ರಾಮಾಜೋಯಿಸ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಇತರರಿಗೆ ಅನುಕರಣೀಯವಾಗಿರುವ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾದ ಸಂತಾಪ ಸೂಚಕ ನಿರ್ಣಯದ ಸಂದರ್ಭದಲ್ಲಿ ಅವರು ಮಾತನಾಡಿದರು. ನಮ್ಮನ್ನು ಅಗಲಿರುವ ರಾಮಾಜೋಯಿಸ್ ಅವರ ವ್ಯಕ್ತಿತ್ವ ವಿಶಿಷ್ಟವಾದದ್ದು. ನ್ಯಾಯಾಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿರುವ ಸೇವೆ ಅಪಾರವಾದದ್ದು. ಅವರು ತಮ್ಮ ಸೇವಾ ವ್ಯಾಪ್ತಿಯನ್ನು ಕೇವಲ ನ್ಯಾಯಾಂಗ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಬದಲಿಗೆ ಅವರು ಸಮಾಜದ ವಿವಿಧ ವಿಚಾರಗಳ ಕುರಿತು ಚಿಂತನೆ ಮಾಡುತ್ತಿದ್ದರು.
ಪ್ರಜಾಪ್ರಭುತ್ವದ ಮೇಲೆ ರಾಮಾ ಜೋಯಿಸ್ ಅವರಿಗೆ ಅಪಾರ ನಂಬಿಕೆ. ಹೀಗಾಗಿ ಅವರು ರಾಜಕೀಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸಿದರು. ಅವರ ಸಾಮಾಜಿಕ ಬದ್ಧತೆ ಪ್ರಶ್ನಾತೀತವಾದದ್ದು. ಅವರು ಕೇವಲ ರಾಜ್ಯಪಾಲರಾಗಿ, ನ್ಯಾಯಮೂರ್ತಿಯಾಗಿ ಮಾತ್ರ ಸೇವೆ ಸಲ್ಲಿಸಿದೆ ರಾಜ್ಯಸಭೆ ಸದಸ್ಯರಾಗಿ ಸಹಿತ ಅವರು ಕರ್ತವ್ಯ ನಿರ್ವಹಿಸಿದರು. ಇದರ ಜೊತೆಗೆ ಅವರು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವುದು ಗಮನಾರ್ಹ.
ಇದರೊಂದಿಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗದಲ್ಲಿ ಸಹಿತ ಸೇವೆ ಸಲ್ಲಿಸಿದ ಪ್ರಮುಖರು ಎಂದು ಬೊಮ್ಮಾಯಿ ಹೇಳಿದರು. ಸಾಹಿತಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರೊಬ್ಬ ಸಂವೇದನಶೀಲ ಸಾಹಿತಿ. ಕನ್ನಡ ಭಾಷೆಯ ಸಾಹಿತ್ಯವನ್ನು ಇತರೆ ಭಾಷೆಗೆ ವಿಸ್ತರಿಸಿದ್ದಾರೆ. ಇತರೆ ಭಾಷೆಯಲ್ಲಿದ್ದ ಶ್ರೀಮಂತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಅವರ ಸಾಹಿತ್ಯವೇ ವಿಭಿನ್ನವಾದದ್ದು. ಅವರು ಕೂಡ ವಿಭಿನ್ನ ಸಾಹಿತಿಗಳಾಗಿದ್ದರು. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು. ಡಾ. ಎಂ ಮಹದೇವಪ್ಪ ಅವರು ಹೆಸರಾಂತ ಕೃಷಿ ವಿಜ್ಞಾನಿ. ಧಾರವಾಡದ ಕೃಷಿ ಮಹಾವಿದ್ಯಾಲಯ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿದಾಗ ಮಹದೇವಪ್ಪ ಅವರು ಆ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಶ್ವವಿದ್ಯಾಲಯ ದೇಶದ ಅಗ್ರಮಾನ್ಯ ಸ್ಥಾನಕ್ಕೇರಲು ಮಹದೇವಪ್ಪ ಅವರ ಕೊಡುಗೆ ಅಪಾರವಾದದ್ದು. ಅಷ್ಟೇ ಅಲ್ಲ ಕೃಷಿ ಉತ್ಪನ್ನಗಳ ಸುಧಾರಿತ ತಳಿಗಳನ್ನು ಅಭಿವೃದ್ದಿಪಡಿಸಲು ಅವರು ಶ್ರಮ ವಹಿಸಿದ್ದಾರೆ ಎಂದರು . ರಾಮಾಜೋಯಿಸ್, ಲಕ್ಷ್ಮೀನಾರಾಯಣ ಭಟ್ ಹಾಗೂ ಡಾ.ಮಹದೇವಪ್ಪ ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಬಸವರಾಜ್ ಬೊಮ್ಮಾಯಿ ಕೋರಿದರು.