ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅವರು ನನಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಎಡಿಜಿಪಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಬುಧವಾರ ರಾತ್ರಿ ಬೆಂಗಳೂರನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಾಂಕ 9 3 2021 ರಂದು ಮಾಜಿ ಮಂತ್ರಿಗಳಾದ ರಮೇಶ್ ಜಾರಕಿಹೊಳಿ ಅವರ ನನಗೆ ಪತ್ರ ಬರೆದು, ಅವರ ವಿರುದ್ಧ ದಿನಾಂಕ ೦೨-೦೩-೨೦೨೧ ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದು ಅರ್ಜಿ ನೀಡಿದ್ದು, ಅದರಲ್ಲಿ ಅವರ ವಿರುದ್ಧ ರಾಜಕೀಯ ತೇಜೋವಧೆ ಹಾಗೂ ಮಾನಹಾನಿ ಮಾಡುವ ಉದ್ದೇಶವಿದ್ದು ಇದರಲ್ಲಿ ಹಲವಾರು ಜನ ಸೇರಿ ಷಡ್ಯಂತ್ರ ರೂಪಿಸಿರುವಂಥದ್ದು ಬಹಳ ಸ್ಪಷ್ಟವಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಈ ಷಡ್ಯಂತ್ರವನ್ನು ರೂಪಿಸಿರುವ ಹಾಗೂ ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಕೂಲಂಕುಶವಾಗಿ ವಿಚಾರಣೆ ಯನ್ನು ಮಾಡಲು ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಲು ಹಾಗೂ ಅದರ ನೇತೃತ್ವವನ್ನು ಶ್ರೀ ಸೌಮೇಂದು ಮುಖರ್ಜಿ, ಎಡಿಜಿಪಿ ಇವರಿಗೆ ವಹಿಸುವುದು ಮತ್ತು ಈ ಬಗ್ಗೆ ಸಂಪೂರ್ಣ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರಕ್ಕೆ ನೀಡುವಂತೆ ಸೂಚಿಸಿದ್ದೇನೆ ಎಂದರು.