ಬೆಳಗಾವಿ: ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತಗಳೇ ಹೆಚ್ಚು ಇವೆ. ಈ ಮತಗಳನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸತೀಶ ಜಾರಕಿಹೊಳಿ ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, "ನಮ್ಮ ಮತಗಳನ್ನು ನಾವು ಸೆಳೆಯುವ ನಿಟ್ಟಿನಲ್ಲಿ ಜನರಿಗೆ ತಿಳಿಹೇಳಿ ಮತದಾನ ಮಾಡಿಸುವ ಕೆಲಸ ಮಾಡಬೇಕು. ಮನೆಮನೆಗೆ ತೆರಳಿ ಪ್ರಚಾರ ನಡೆಸಬೇಕು" ಎಂದು ಹೇಳಿದರು.
ಕಾಂಗ್ರೆಸ್ ಗೆ ಶಕ್ತಿ ನೀಡುವ ಚುನಾವಣೆ:
ಬೆಳಗಾವಿ ಲೋಕಸಭಾ ಉಪಚುನಾವಣೆಯೂ ದೇಶದಲ್ಲೇ ಕಾಂಗ್ರೆಸ್ ಗೆ ಶಕ್ತಿ ನೀಡುವ ಚುನಾವಣೆಯಾಗಿದೆ. ನಾವು ಇಲ್ಲಿ ಗೆಲ್ಲುವ ಮೂಲಕ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರು ತಿರುಗಿ ಬಿದ್ದಿದ್ದಾರೆ ಎಂಬುದನ್ನು ತೋರಿಸಬೇಕಿದೆ" ಎಂದರು.
ಕಳೆದ ಎರಡು ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಮೋದಿ ಅವರ ಸುಳ್ಳು ಭರವಸೆಗಳನ್ನು ನಂಬಿ ಜನರು ಬಿಜೆಪಿಯತ್ತ ವಾಲಿದ್ದರು. ಆದರೆ, ಈಗ ಆ ಭರವಸೆಗಳು ಹುಸಿಯಾಗಿವೆ. ಹೀಗಾಗಿ, ಈ ಬಗ್ಗೆ ನಾವು ಮತದಾರರಿಗೆ ತಿಳಿಹೇಳಬೇಕಿದೆ. ನಾವು ಆಯ್ಕೆಯಾದರೇ ಏನು ಮಾಡಲಿದ್ದೇವೆ ಎಂಬುದನ್ನು ಕೂಡ ಜನರಿಗೆ ತಿಳಿಸಬೇಕು" ಎಂದು ಸತೀಶ ಹೇಳಿದರು.
ದೇಶಪಾಂಡೆಗೆ ಉತ್ತರ-ದಕ್ಷಿಣ ಸಾರಥ್ಯ:
ಹಿರಿಯ ಮುಖಂಡ ಆರ್.ವಿ. ದೇಶಪಾಂಡೆಗೆ ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಧಾಸಭಾ ಕ್ಷೇತ್ರಗಳ ನೇತೃತ್ವವನ್ನು ಪಕ್ಷ ವಹಿಸಿದೆ. ಅವರ ನೇತೃತ್ವದಲ್ಲಿ ಕಾರ್ಯಕರ್ತರು ಸಂಘಟನೆ ಹಾಗೂ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು" ಎಂದು ಸತೀಶ ತಿಳಿಸಿದರು.
ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಶಾಸಕರು ಇಲ್ಲ. ಆದರೆ, ಅಲ್ಲಿ ನಮ್ಮ ಪಕ್ಷದ ಖಾಯಂ ಮತಗಳಿವೆ. ಅವುಗಳ ಜೊತೆಗೆ ಇನ್ನೂ ಎರಡು ಪಟ್ಟು ಹೆಚ್ಚು ಮತಗಳನ್ನು ಸೆಳೆಯುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು" ಎಂದು ಹೇಳಿದರು.
ಮಾಜಿ ಸಚಿವರು ಹಾಗೂ ಶಾಸಕರಾದ ಆರ್.ವಿ. ದೇಶಪಾಂಡೆ, ಮಾಜಿ ಶಾಸಕರಾದ ಫಿರೋಜ್ ಶೇಠ್, ಎಸ್.ಬಿ. ಘಾಟಗೆ, ವೀರಕುಮಾರ ಪಾಟೀಲ, ಎ.ಬಿ. ಪಾಟೀಲ, ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಅನಿಲ ಪೋತದಾರ್, ಜಯಶ್ರೀ ಮಾಳಗಿ, ಲತಾ ಮಾನೆ, ಆನಂದ ಗಡ್ಡದವರಮಠ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.