ಚುನಾವಣಾ ಕಣ್ಗಾವಲು ವ್ಯವಸ್ಥೆ: ಪರಿಣಾಮಕಾರಿ ಬಳಕೆಗೆ ಸಲಹೆ: ತ್ರಿಪಾಠಿ

  • 15 Jan 2024 , 1:45 AM
  • Belagavi
  • 91

ಬೆಳಗಾವಿ: ಲೋಕಸಭಾ ಉಪ ಚುನಾವಣಾ ಸಾಮಾನ್ಯ ವೀಕ್ಷಕ(ಜನರಲ್ ಅಬ್ಸರ್ವರ್)ರಾದ ಹಿರಿಯ ಐ.ಎ.ಎಸ್ ಅಧಿಕಾರಿ ಡಾ.ಚಂದ್ರಭೂಷಣ್ ತ್ರಿಪಾಠಿ ಅವರು ಬುಧವಾರ ಮಾಧ್ಯಮ ಕಣ್ಗಾವಲು, ಎಂಸಿಸಿ, ಸಿವಿವಿಜಿಲ್, ದೂರುನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರದ ವಾರ್ತಾಭವನದಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಕೇಂದ್ರದ ಸಮಗ್ರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಅವರು, ಚುನಾವಣೆಗೆ ಸಂಬAಧಿಸಿದAತೆ ಯಾವುದೇ ರೀತಿಯ ಅಕ್ರಮಗಳ ಬಗ್ಗೆ ದೂರು ಅಥವಾ ಮಾಹಿತಿ ಲಭಿಸಿದರೆ ಸಂಬಂದಿಸಿದ ನೋಡಲ್ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು. ಮಾದರಿ ನೀತಿಸಂಹಿತೆ ಜಾರಿ ಬಂದ ದಿನದಿಂದ ಇದುವರೆಗೆ ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳ ಪತ್ರಿಕಾ ತುಣುಕುಗಳನ್ನು ಅವರು ಪರಿಶೀಲಿಸಿದರು.

ಟಿವಿ ಮಾಧ್ಯಮಗಳು ಹಾಗೂ ಅಧಿಕೃತ ಅಭ್ಯರ್ಥಿಗಳು ಮತ್ತು ಪಕ್ಷಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ವರದಿಗಳ ಮೇಲೆ ಯಾವ ರೀತಿ ನಿಗಾ ವಹಿಸುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಮಾಧ್ಯಮ ಕಣ್ಗಾವಲು ಕೇಂದ್ರದ ಕಾರ್ಯನಿರ್ವಹಣೆ ಕುರಿತು ವಿವರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಹಾಗೂ ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ 40 ಅಧಿಕ ದಿನಪತ್ರಿಕೆಗಳಲ್ಲಿ ಪ್ರತಿದಿನ ಪ್ರಕಟವಾಗುವ ಚುನಾವಣಾ ಸಂಬಂದಿತ ಸುದ್ದಿ-ಜಾಹೀರಾತುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೇ ಎಲ್ಲ ಪ್ರಮುಖ ಟಿವಿ ಚಾನೆಲ್ ಗಳು, ಕೇಬಲ್ ಟಿವಿ ಮತ್ತು ಚುನಾವಣಾ ಅಭ್ಯರ್ಥಿಗಳ ಅಧಿಕೃತ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳ ಮೇಲೂ ನಿಗಾ ಇರಿಸಲಾಗಿರುತ್ತದೆ ಎಂದು ಹೇಳಿದರು.

ಎಂಸಿಸಿ ಕೇಂದ್ರಕ್ಕೆ ವೀಕ್ಷಕರ ಭೇಟಿ:ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಆರಂಭಿಸಲಾಗಿರುವ ಮಾದರಿ ನೀತಿ ಸಂಹಿತೆ ಕಂಟ್ರೋಲ್ ರೂಮ್, ಸಿವಿಜಿಲ್ ಹಾಗೂ ದೂರು ನಿರ್ವಹಣಾ ಕೇಂದ್ರಗಳಿಗೂ ಚುನಾವಣಾ ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಂಸಿಸಿ ನೋಡಲ್ ಅಧಿಕಾರಿ ನಿಸಾರ್ ಅಹ್ಮದ್ ಅವರು, ನೀತಿಸಂಹಿತೆ ಉಲ್ಲಂಘನೆಗೆ ಸಂಬಂದಿಸಿದ ದೂರು ಹಾಗೂ ಮಾಹಿತಿಯನ್ನು ಆಧರಿಸಿ ನಿಯಮಾವಳಿ ಪ್ರಕಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಲೋಕಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ 27 ಚೆಕ್ ಪೋಸ್ಟ್ ಗಳ ಮೇಲೆ ಕೂಡ ವೆಬ್ ಕ್ಯಾಮೆರಾ ಮೂಲಕ ಇಲ್ಲಿಂದಲೇ ನಿಗಾ ವಹಿಸಲಾಗಿದೆ.

ಇದಲ್ಲದೇ ಫ್ಲೈಯಿಂಗ್ ಸ್ಕ್ವಾಡ್ ಗಳ ವಾಹನಗಳಿಗೂ ಜಿಪಿಎಸ್ ಅಳವಡಿಸಿರುವುದರಿಂದ ಪ್ರತಿ ತಂಡಗಳ ಚಲನವಲನಗಳನ್ನು ಕಂಟ್ರೋಲ್ ರೂಮ್ ನಿಂದಲೇ ಪರಿಶೀಲಿಸಲಾಗುತ್ತಿದೆ ಎಂದು ನಿಸಾರ್ ಅಹ್ಮದ್ ತಿಳಿಸಿದರು.

ಎಂಸಿಸಿ, ಸಿವಿಜಿಲ್, ದೂರು ನಿರ್ವಹಣಾ ಕೇಂದ್ರ ಹಾಗೂ ಜಿಪಿಎಸ್ ಟ್ರ‍್ಯಾಕಿಂಗ್ ವಿಧಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಾಮಾನ್ಯ ವೀಕ್ಷಕ ಡಾ.ಚಂದ್ರಭೂಷಣ್ ತ್ರಿಪಾಠಿ ಅವರು, ಪ್ರಸ್ತುತ ನಿಗಾ ವ್ಯವಸ್ಥೆಯನ್ನು ಚುನಾವಣೆ ಮುಗಿಯುವರೆಗೆ ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು.

ದೂರು ನಿರ್ವಹಣಾ ಕೇಂದ್ರದ ನೋಡಲ್ ಅಧಿಕಾರಿ ಬಸವರಾಜ ಶಿವಣ್ಣನವರ, ಮಾಧ್ಯಮ ಕಣ್ಗಾವಲು ಕೇಂದ್ರದ ಸಿಬ್ಬಂದಿ ಶ್ರೀಮತಿ ಝಡ್.ಜಿ.ಸಯ್ಯದ್, ಎಂ.ಸಿ.ಪತ್ತಾರ, ವಿನಾಯಕ ವಣ್ಣೂರ, ಕೆ.ಆರ್.ಕುಲಕರ್ಣಿ, ಎಂ.ಎಮ್.ಪಾಟೀಲ, ಜಿ.ವೈ.ಕಾವಳೆ, ಕೆ.ಎಸ್.ಕಾಗಲೆ, ವಜ್ರಾ ಪಾಟೀಲ, ಜಿ.ಡಿ.ಹಳೆಮನಿ ಮತ್ತಿತರರು ಉಪಸ್ಥಿತರಿದ್ದರು.

Read All News