ಬೆಳಗಾವಿ :ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಕೋವಿಡ್-19 ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಡಿಯಲ್ಲಿ ಸೂಚಿಸಿದ ಕ್ರಮಗಳನ್ನು ಪರಿಣಾಮಕಾರಿಯಾಗಿ ಪಾಲಿಕೆಯ ವತಿಯಿಂದ ಕೈಗೊಳ್ಳಲಾಗಿದೆ.
ಕೋವಿಡ್-19 ಪ್ರಕರಣಗಳ ಏರಿಕೆಯ ಮೇಲೆ ನಿಯಂತ್ರಣ ಸಾಧಿಸಲು ಮುನ್ನೆಚ್ಚರಿಕೆಗಾಗಿ ಸೂಕ್ತ ವರ್ತನೆಗಳಾದ ಕಡ್ಡಾಯವಾಗಿ ಮುಖಗವಸವನ್ನು (ಮಾಸ್ಕ್) ಪೂರ್ಣಪ್ರಮಾಣದಲ್ಲಿ ಧರಿಸುವುದು, ದೈಹಿಕ ಅಂತರ ಪಾಲನೆ ಮಾಡುವುದು, ಹ್ಯಾಂಡ್ ಸ್ಯಾನಿಟೈಜರ್, ಹ್ಯಾಂಡ್ ವಾಷ್‌ಗಳ ಬಳಕೆಯನ್ನು ಮಾಡುವುದು ಹಾಗೂ ಸಾರ್ವಜನಿಕ ರಸ್ತೆಗಳಲ್ಲಿ, ಅಂಗಡಿ-ಮುಂಗಟ್ಟುಗಳಲ್ಲಿ , ವಾಹನ ಚಲಾಯಿಸುವಾಗ, ರಸ್ತೆಯ ಬದಿಯಲ್ಲಿ ಖರೀದಿ-ವಿಕ್ರಿ ನಡೆಸುವಲ್ಲಿ ಇತ್ಯಾದಿ ಸಂದರ್ಭಗಳಲ್ಲಿ ಸಾರ್ವಜನಿಕರು ಅಗತ್ಯ ಕ್ರಮವಹಿಸಬೇಕು.
ಮಾಸ್ಕ್ ಧರಿಸದೇ ಇರುವವರನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಾನ-ಗುಟುಕಾ-ತಂಬಾಕು ಸೇವನೆ ಮಾಡಿ ಉಗುಳುವವರನ್ನು, ಧೂಮ್ರಪಾನ ಮಾಡುವವರನ್ನು ಗುರುತಿಸಿ ಸ್ಥಳದಲ್ಲಿಯೇ ಸರ್ಕಾರದ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು.
ಪ್ರಯುಕ್ತ ದಂಡ ಆಕರಣೆಗೆ ನಗರದ ಯಾವತ್ತು ಸಾರ್ವಜನಿಕರು ಅವಕಾಶ ನೀಡದೇ ತಮ್ಮ, ತಮ್ಮ ಕುಟುಂಬದ ಹಾಗೂ ಸಂಪರ್ಕಕ್ಕೆ ಬರುವವರೆಲ್ಲರ ಹಿತದೃಷ್ಠಿಯಿಂದ ಕಡ್ಡಾಯವಾಗಿ ಮನೆಯಿಂದ ಹೊರಬರುವ ಮುನ್ನವೇ ಸ್ವಯಂ ಪ್ರೇರಣೆಯಿಂದ ಮುಖಗವಸ (ಮಾಸ್ಕ್) ಧರಿಸಲು/ದೈಹಿಕ ಅಂತರ/ಹ್ಯಾಂಡ್ ಸ್ಯಾನಿಟೈಜರ್/ಹ್ಯಾಂಡ್ ವಾಷಗಳ ಬಳಕೆಯನ್ನು ಮಾಡುವಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳದಿರುವಂತೆ ಈ ಮೂಲಕ ಮನವಿ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.