ಸತೀಶ್ ಜಾರಕಿಹೊಳಿ ಪರ ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ಗಣೇಶ ಹುಕ್ಕೇರಿ ಪ್ರಚಾರ

  • 15 Jan 2024 , 2:09 AM
  • Belagavi
  • 133

ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಅವರನ್ನು ನಂಬಿ ಮತ ಹಾಕಿದ ಜನರು ಇಂದು ಪಶ್ಚಾತ್ತಾಪ ಪಡುವಂತಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲಹೇಳಿದರು.

ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರವಾಗಿ ಭಾನುವಾರ ಸಾಂಬ್ರಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿರುವ ಸತೀಶ್ ಜಾರಕಿಹೊಳಿ ಒಬ್ಬ ಪ್ರಭಾವಿ ನಾಯಕರಾಗಿದ್ದು, ತಮ್ಮದೇ ಆದ ಅಭಿವೃದ್ಧಿಯ ಕನಸನ್ನು ಹೊಂದಿದ್ದಾರೆ.

ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಇಂತಹ ನಾಯಕರ ಅಗತ್ಯವಿದೆ. ಹಾಗಾಗಿ ಅವರನ್ನು ಗೆಲ್ಲಿಸಲು ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು ಎಂದು ಅವರು ವಿನಂತಿಸಿದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಒಮ್ಮತದ ಅಭ್ಯರ್ಥಿ.

ಅವರನ್ನು ಕಣಕ್ಕಿಳಿಸುವುದಕ್ಕೆ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅವರ ನಾಯಕತ್ವ ಎಂತ್ತದ್ದು ಎನ್ನುವುದು ಹಳ್ಳಿ ಮೂಲೆಯಿಂದ ಹಿಡಿದು ದಿಲ್ಲಿಯವರೆಗೆ ಎಲ್ಲರಿಗೂ ಗೊತ್ತಿದೆ. ಅವರನ್ನು ಈ ಬಾರಿ ಲಕ್ಷಕ್ಕೂ ಹೆಚ್ಚು ಬಹುಮತದಿಂದ ಆಯ್ಕೆ ಮಾಡೋಣ ಎಂದರು.

ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಪಕ್ಷ. ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸುವ ಪಕ್ಷ, ಬಿಜೆಪಿಗೆ ಜನರ ನೋವು ಅರ್ಥವಾಗುವುದಿಲ್ಲ. ಎಲ್ಲ ವಸ್ತುಗಳ ಬೇಲೆ ವಿಪರೀತ ಏರುತ್ತಿದ್ದರೂ ಸ್ಪಂದಿಸುತ್ತಿಲ್ಲ. ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ.

ಹಾಗಾಗಿ ಈ ಬಾರಿ ಸತೀಶ್ ಜಾರಕಿಹೊಳಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿ ಕಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಮುಖಂಡರು, ರಾಜು ಸೇಠ್, ಸಿ ಸಿ ಪಾಟೀಲ, ನಾಗರಾಜ ಯಾಧವ್, ಚನ್ನರಾಜ ಹಟ್ಟಿಹೊಳಿ, ಶಂಕರಗೌಡ ಪಾಟೀಲ, ನಾಗೇಶ ದೇಸಾಯಿ, ಬಸವರಾಜ‌ ಮ್ಯಾಗೋಟಿ, ನಿಲೇಶ್ ಚಂದಗಡ್ಕರ್, ಮೃಣಾಲ್ ಹೆಬ್ಬಾಳಕರ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Read All News