ಬಸವಕಲ್ಯಾಣ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಇಂದು ಬಿರುಸಿನ ಪ್ರಚಾರ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ ಸಚಿವ ಬೊಮ್ಮಾಯಿ ಅವರು, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಚುನಾವಣೆಯ ಮತದಾನದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದರು. ಬಸವಕಲ್ಯಾಣದಲ್ಲಿ ಏರ್ಪಡಿಸಲಾಗಿದ್ದ ಪ್ರಬುದ್ಧರ ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಲ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಜೆಡಿಎಸ್ ತೊರೆದು ಬಿಜೆಪಿ ಬಾವುಟ ಹಿಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ವಿ ಸೋಮಣ್ಣ ಸೇರಿದಂತೆ ಅನೇಕ ಮುಖಂಡರು, ಗಣ್ಯರು ಉಪಸ್ಥಿತರಿದ್ದರು. ಮಧ್ಯಾಹ್ನದ ನಂತರ ಮತ್ತೆ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರ ಪ್ರಚಾರದ ಅಖಾಡಕ್ಕಿಳಿದರು.
ಮುಡಬಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮಾಟಾಳದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಅವಿನಾಶ್ ಜಾಧವ್ ಚುನಾವಣಾ ಪ್ರಚಾರದಲ್ಲಿ ಸಾಥ್ ನೀಡಿದರು.
ಸ್ಥಳಪರಿಶೀಲನೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಬಸವಕಲ್ಯಾಣ ವಿಧಾನಸಭೆ ಚುನಾವಣೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಮುಡಬಿಯಲ್ಲಿ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ.
ಈ ಸಮಾವೇಶಕ್ಕೆ ಮಾಡಲಾಗಿರುವ ಸಿದ್ಧತೆ ಕುರಿತು ಅವರು ಸ್ಥಳ ಪರಿಶೀಲನೆ ನಡೆಸಿದರು. ಸಮಾವೇಶದ ಕುರಿತು ಆಯೋಜಕರಿಗೆ ಹಲವು ಸೂಚನೆಗಳನ್ನು ನೀಡಿದರು.