ಬೆಳಗಾವಿ:ಮಹಾಮಾರಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯದ ಕಫ್ರ್ಯೂಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಉತ್ತಮ ಪ್ರತಿಕ್ರಿಯೆ ದೊರತಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದ್ದವು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಆಟೋ ರೀಕ್ಷಾಗಳು ರಸ್ತೆಗೆ ಇಳಿದಿರಲಿಲ್ಲ.
ಭಾನುವಾರ ಸಾರಿಗೆ ಬಸ್ ಗಳು ಬೀದಿಗೆ ಬರದೆ ಲಾಕ್ ಡೌನ್ ಗೆ ಸಹಕಾರ ನೀಡಿದವು. ಅಲ್ಲದೆ ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿಗೆ ಬರುವ ಜನರನ್ನು ಪೊಲೀಸರು ಹೊರಗಡೆಯಿಂದ ಹೊರಗೆಯೇ ಕಳುಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಭಾನುವಾರ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ತರಕಾರಿ, ಹಾಲು, ಕಿರಾಣಿ ಅಂಗಡಿ, ಬೇಕರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಮಳಿಗೆಗಳು ತೆರೆದಿದ್ದವು. ಆಗ ಗ್ರಾಹಕರು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.