ರೆಮಿಡಿಸಿವಿರ್ ಸಮರ್ಪಕ ಪೂರೈಕೆ ಹಾಗೂ ಅಕ್ರಮ ಮಾರಾಟ ತಡೆಗೆ ಕ್ರಮ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

  • 15 Jan 2024 , 2:12 AM
  • Belagavi
  • 102

ಬೆಳಗಾವಿ: ರೆಮಿಡಿಸಿವಿರ್ ಉತ್ಪಾದನೆ ಇತ್ತೀಚೆಗೆ ಕಡಿಮೆ‌ ಮಾಡಲಾಗಿತ್ತು. ಇದರಿಂದ ದಿಢೀರ್ ಆಗಿ ಕೊರತೆ ಕಂಡುಬಂದಿದೆ. ಇನ್ನೆರಡು ದಿನಗಳಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ಸಾಕಷ್ಟು ರೆಮಿಡಿಸಿವಿರ್ ಇಂಜೆಕ್ಷನ್ ಲಭಿಸಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

ಕೋವಿಡ್-೧೯ ನಿಯಂತ್ರಣ, ಆಕ್ಸಿಜನ್ ಹಾಗೂ ರೆಮಿಡಿಸಿವಿರ್ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾವಾರು‌ ರೆಮಿಡಿಸಿವಿರ್ ವಿತರಿಸುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ 50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವುದರಿಂದ ಜಿಲ್ಲೆಯ ಜನಸಂಖ್ಯೆ ಆಧರಿಸಿ ಬೇಡಿಕೆ ಸಲ್ಲಿಸಬೇಕು ಎಂದು ಸಹಾಯಕ ಔಷಧ ನಿಯಂತ್ರಕರಿಗೆ ಸೂಚನೆ ನೀಡಿದರು.

ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ರೆಮಿಡಿಸಿವಿರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿರುವ ರೆಮಿಡಿಸಿವಿರ್ ಬಳಕೆ ಹಾಗೂ ಅದಕ್ಕೆ ವಿಧಿಸಲಾಗುತ್ತಿರುವ ದರಗಳ ಮೇಲೆ ಕೂಡ ಔಷಧ ನಿಯಂತ್ರಕರು ನಿಗಾ ವಹಿಸಬೇಕು ಎಂದು ಲಕ್ಷ್ಮಣ ಸವದಿ ತಿಳಿಸಿದರು.

ರೆಮಿಡಿಸಿವಿರ್ ಅಕ್ರಮ‌ ಮಾರಾಟ; ನಿಗಾ ವಹಿಸಲು ಸೂಚನೆ:

ಜಿಲ್ಲೆಯಲ್ಲಿ ರೆಮಿಡಿಸಿವಿರ್ ಗರಿಷ್ಠ ಮಾರಾಟ‌ ಬೆಲೆಗಿಂತ ಹೆಚ್ಚು ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿಸಿವಿರ್ ನೀಡುತ್ತಿದೆ. ಆದರೆ ಹೀಗೆ ನೀಡಲಾದ ಔಷಧಕ್ಕೆ ಕೆಲವು ಕಡೆ ಮಿತಿಮೀರಿ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಈ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು. ಇದಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸುವಂತೆ ಸಭೆಯಲ್ಲಿ ತಿಳಿಸಲಾಯಿತು.

ಬಿಮ್ಸ್ ಕಾರ್ಯವೈಖರಿ ಸುಧಾರಣೆಗೆ ಕ್ರಮ:ಸಭೆಗೆ‌ ಗೈರುಹಾಜರಾದ ಬಿಮ್ಸ್ ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ತಕ್ಷಣವೇ ನಿರ್ದೇಶಕರನ್ನು ಸಭೆಗೆ ಕರೆಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದರೂ ಬಿಮ್ಸ್ ನಲ್ಲಿ ಸಕಲ ವ್ಯವಸ್ಥೆ ಇದ್ದಾಗಲೂ ಕೋವಿಡ್ ಸೋಂಕಿತರು ಬಿಮ್ಸ್ ಗೆ ಯಾಕೆ ಬರುತ್ತಿಲ್ಲ ಎಂದು ನಂತರ ಸಭೆಗೆ‌ ಆಗಮಿಸಿದ ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರನ್ನು ಪ್ರಶ್ನಿಸಿದರು.

ಸರಕಾರ ಎಲ್ಲ ಸೌಲಭ್ಯಗಳನ್ನು ನೀಡಿದರೂ ಬಿಮ್ಸ್ ಗೆ ಜನರು ಬರದಿದ್ದರೆ ಏನು ಪ್ರಯೋಜನ ಎಂದು‌ ಖಾರವಾಗಿ ಕೇಳಿದರು. ಬಿಮ್ಸ್ ನಿರ್ದೇಶಕರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಕ್ಷಣವೇ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲ್ಲೂಕು ಮಟ್ಟದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೌಲಭ್ಯ, ಬೆಡ್ ಸಾಮರ್ಥ್ಯ ಹೆಚ್ಚಳ ಸೇರಿದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು.

ತುರ್ತು ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಔಷಧೋಪಕರಣಗಳು, ಸಿಬ್ಬಂದಿ, ಆಂಬ್ಯುಲೆನ್ಸ್ ಮತ್ತಿತರ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ ನೀಡಿದರು.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ತುರ್ತು ಪರಿಸ್ಥಿತಿ ನಿಭಾಯಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಂದಾಯ, ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಸಚಿವ ಉಮೇಶ್ ಕತ್ತಿ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣ ಸಮಿತಿ:

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಚಿವರಾದ ಉಮೇಶ್ ಕತ್ತಿ ಅವರ ಅಧ್ಯಕ್ಷತೆಯಲ್ಲಿ ‌ಜಿಲ್ಲಾ ಕೋವಿಡ್ ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಭೆಯಲ್ಲಿ ಪ್ರಕಟಿಸಿದರು.

ಉಸ್ತುವಾರಿ ಸಚಿವರು ಇಲ್ಲದಿರುವುದರಿಂದ ಉಮೇಶ್ ಕತ್ತಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಜಿಲ್ಲಾ ಕೋವಿಡ್-೧೯ ನಿಯಂತ್ರಣ ಸಮಿತಿಯಲ್ಲಿ ಜಿಲ್ಲೆಯ ಎಲ್ಲ ಶಾಸಕರು ಸದಸ್ಯರಾಗಿರುತ್ತಾರೆ.

ಕೋವಿಡ್ ನಿಯಂತ್ರಣಕ್ಕೆ ಸರಕಾರದ ಮಾರ್ಗಸೂಚಿ ಜಾರಿಗೊಳಿಸುವುದು. ಅಗತ್ಯ ಔಷಧೋಪಕರಣಗಳ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸಮಿತಿಯು ನಿರ್ಧರಿಸಲಿದೆ. ವಾರದಲ್ಲಿ ಕನಿಷ್ಠ ಒಂದು ಬಾರಿ ಸಮಿತಿಯು ಸಭೆ ನಡೆಸಲಿದೆ ಎಂದು ವಿವರಿಸಿದರು.

ಸೋಂಕಿತರ ಸಂಖ್ಯೆ‌ಆಧರಿಸಿ ರೆಮಿಡಿಸಿವಿರ್ ಪೂರೈಸಲು ಮನವಿ:

ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿತರ ಸಂಖ್ಯೆ ಆಧರಿಸಿ ರೆಮಿಡಿಸಿವಿರ್ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಾದ ಶಶಿಕಲಾ ಜೊಲ್ಲೆ ಮನವಿ ಮಾಡಿಕೊಂಡರು.

ನಿಪ್ಪಾಣಿ ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿರುವ ಬೆಡ್ ಗಳ ಆಧಾರದ ಮೇಲೆ ಕೋವಿಡ್ ಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಆರಂಭಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರೆಮಿಡಿಸಿವಿರ್ ಗೆ ಇರುವ ಪರ್ಯಾಯ ಔಷಧದ ಕುರಿತು ಜನರಿಗೆ ಮಾಹಿತಿಯನ್ನು ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕ ಅಭಯ್ ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ರೆಮಿಡಿಸಿವಿರ್ ಕೊರತೆ‌ ಕಂಡುಬರುತ್ತಿದ್ದು, ತಕ್ಷಣವೇ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರೆಮಿಡಿಸಿವಿರ್ ನೀಡಲು ಹೆಚ್ಚಿನ ದರ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಮ್ಸ್ ವ್ಯವಸ್ಥೆಯನ್ನು ಸರಿಪಡಿಸಿ ಪ್ರತಿದಿನ ದಾಖಲಾಗುವ ರೋಗಿಗಳ ಸಂಖ್ಯೆ ಮತ್ತು ಲಭ್ಯವಿರುವ ಬೆಡ್ ಗಳ ಸಂಖ್ಯೆ‌ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು‌ ಶಾಸಕ ಅಭಯ್ ಪಾಟೀಲ ಹೇಳಿದರು.

ಶಾಸಕ ಮಹಾಂತೇಶ ಕೌಜಲಗಿ ಅವರು ಮಾತನಾಡಿ, ರೆಮಿಡಿಸಿವಿರ್ ವಿತರಣೆಗೆ ಜಿಲ್ಲಾಮಟ್ಟದಲ್ಲಿ ಒಂದು ಸಮಿತಿ ರಚಿಸಿ, ಅದರ‌ ಮೂಲಕವೇ ಅಗತ್ಯತೆ ಆಧರಿಸಿ ರೆಮಿಡಿಸಿವಿರ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೈಲಹೊಂಗಲ ದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೂಡಲೇ ರೆಮಿಡಿಸಿವಿರ್ ವಿತರಣೆ ಮಾಡಬೇಕು ಎಂದರು. ಕೋವಿಡ್ ಸೋಂಕಿತರ ಸಂಪರ್ಕಿತರನ್ನು ಪತ್ತೆ‌ಮಾಡಲು ಮನೆ ಮನೆಗೆ ತೆರಳುವ ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಅಗತ್ಯ ಲಸಿಕೆ ಸಂಗ್ರಹಕ್ಕೆ ಸಲಹೆ:

ಕೋವಿಡ್ ಲಸಿಕೆ ಪಡೆಯಲು ಜನರು ಇದೀಗ ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿದ್ದು, ಮೇ‌ 1 ರ ಬಳಿಕ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ನಿರ್ಧರಿಸಿರುವುದರಿಂದ ಬೇಡಿಕೆ ಹೆಚ್ಚಾಗಬಹುದು. ಆದ್ದರಿಂದ ಲಸಿಕೆ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡಗೌಡ್ರ ಅಧಿಕಾರಿಗಳಿಗೆ ತಿಳಿಸಿದರು.

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು, ಚಿಕ್ಕೋಡಿಯಲ್ಲಿ ಮಾದರಿ ಪರೀಕ್ಷೆಗೆ ಪ್ರಯೋಗಾಲಯ ಆರಂಭಿಸಬೇಕು ಎಂದು ಒತ್ತಾಯಿಸಿದರು.

ರೆಮಿಡಿಸಿವಿರ್ ಹಂಚಿಕೆಗೆ ಸಮಿತಿ-ಜಿಲ್ಲಾಧಿಕಾರಿ:

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿಸಿವಿರ್ ಸಮರ್ಪಕ ಹಂಚಿಕೆ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದ್ದು, ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು.

ಜಿಲ್ಲೆಯಲ್ಲಿ ಲಸಿಕಾಕರಣ ಚುರುಕುಗೊಳಿಸಲು ಕ್ರಮ ಕೈಗೊಂಡಿದ್ದು, ಸರಕಾರದ ಮಾರ್ಗಸೂಚಿ ಪ್ರಕಾರ ಅಕ್ಟೋಬರ್ ವೇಳೆಗೆ ಸಂಪೂರ್ಣ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಬಿಮ್ಸ್ ಆಸ್ಪತ್ರೆಯಲ್ಲಿ ಊಟ, ಚಿಕಿತ್ಸೆ, ಕೋವಿಡ್ ವಾರ್ಡ್ ನಿರ್ವಹಣೆಯನ್ನು ಪ್ರೊಟೊಕಾಲ್ ಪ್ರಕಾರ ಸಮರ್ಪಕವಾಗಿ ಪಾಲನೆ ಮಾಡದಿರುವುದು ಬಿಮ್ಸ್ ಪರಿಶೀಲನೆ ನಡೆಸಿದಾಗ‌ ಕಂಡುಬಂದಿತು ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಸಭೆಯ ಗಮನಕ್ಕೆ ತಂದರು.

ಎಲ್ಲರಿಗೂ ರೆಮಿಡಿಸಿವಿರ್ ಅಗತ್ಯವಿಲ್ಲ-ಸ್ಪಷ್ಟನೆ:

ಬಿಮ್ಸ್ ನಲ್ಲಿ ಸದ್ಯಕ್ಕೆ 30 ಬೆಡ್ ಐಸಿಯು ಆರಂಭಿಸಲಾಗಿದ್ದು, ಅಗತ್ಯತೆ ಆಧರಿಸಿ ಐಸಿಯು ಬೆಡ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದರು.

ಬಿಮ್ಸ್ ನಲ್ಲಿ ರೆಮಿಡಿಸಿವಿರ್ 49 ಸ್ಟಾಕ್ ಇದ್ದು, ಇವುಗಳ ಬಳಕೆಗೆ ತಜ್ಞರ ಸಮಿತಿ ರಚಿಸಲಾಗಿದ್ದು, ಸಮಿತಿಯ ಅಭಿಪ್ರಾಯದ ಮೇರೆಗೆ ರೆಮಿಡಿಸಿವಿರ್ ಡೋಸ್ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಿದರು.

ಎಲ್ಲ ಸೋಂಕಿತರಿಗೆ ರೆಮಿಡಿಸಿವಿರ್ ನೀಡುವ ಅಗತ್ಯವಿರುವುದಿಲ್ಲ. ಶ್ವಾಸಕೋಶದ ಸೋಂಕು ತೀವ್ರ ಗೊಂಡಾಗ ಮಾತ್ರ ರೆಮಿಡಿಸಿವಿರ್ ನೀಡಲಾಗುವುದು.

822 ಆಕ್ಸಿಜನ್ ಬೆಡ್ ಗಳಿವೆ. ಆದರೆ 350 ಬೆಡ್ ಗಳಿಗೆ ಮಾತ್ರ ‌ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಏಕಕಾಲಕ್ಕೆ 822 ಆಕ್ಸಿಜನ್ ನೀಡುವುದರಿಂದ ಆಕ್ಸಿಜನ್ ವೇಗ ಕುಂಠಿತಗೊಳ್ಳುತ್ತದೆ.

ಜಿಲ್ಲೆಯಲ್ಲಿ ಇದುವರೆಗೆ 6.78 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಖಾಲಿ 1298 ಬೆಡ್ ಖಾಲಿ ಇವೆ. ಇನ್ನೂ 25 ಖಾಸಗಿ ಆಸ್ಪತ್ರೆಗಳು ಕೂಡ ಮುಂದೆ ಬಂದಿದ್ದು, ಅವುಗಳ ಸೌಲಭ್ಯಗಳನ್ನು ಪರಿಶೀಲಿಸಿ ಶೇ.50 ರಷ್ಟು ಬೆಡ್ ಗಳನ್ನು ಪಡೆದುಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು.

137 ವೆಂಟಿಲೇಟರ್ ಸೌಲಭ್ಯ ಇದೆ. ಇತರೆ ಆಸ್ಪತ್ರೆಗಳು ಬೆಡ್ ಒದಗಿಸಿದರೆ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಸಂಖ್ಯೆ 300 ಕ್ಕಿಂತ ಅಧಿಕ ಬೆಡ್ ಗಳು ಲಭಿಸಲಿವೆ ಎಂದು ಮಾಹಿತಿಯನ್ನು ನೀಡಿದರು.

ಜಿಲ್ಲೆಯಲ್ಲಿ ಪ್ರತಿದಿನ 800 ಡೋಸ್‌ ಅಗತ್ಯವಿದ್ದು, 600 ಡೋಸ್ ಗಳು ಕೊರತೆಯಾಗುತ್ತಿದ ಎಂದು ಸಹಾಯಕ ಔಷಧ ನಿಯಂತ್ರಕ ರಘುರಾಮ್ ವಿವರಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ, ನಗರ ಪೊಲೀಸ್ ಆಯುಕ್ತರಾದ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ್ ಎಚ್.ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Read All News