ಬೆಳಗಾವಿ : ಕೊರೋನಾ ಎರಡನೇಯ ಅಲೆಯ ಅಟ್ಟಹಾಸ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗುತ್ತಿದ್ದರೂ, ಜನರು ಮಾತ್ರ ಮಂಗಳವಾರ ನಗರ ಹಾಗೂ ಜಿಲ್ಲೆಯಲ್ಲಿ ರಸ್ತೆಗಿಳಿಯುವ ಮೂಲಕ ಮತ್ತಷ್ಟು ಅವಘಡಗಳಿಗೆ ಪ್ರತ್ಯಕ್ಷವಾಗಿ ಕಾರಣರಾಗುತ್ತಿದಾರೆ. ನಗರ, ಜಿಲ್ಲೆಯಾದ್ಯಂತ ಭಾನುವಾರ ಹಾಗೂ ಸೋಮವಾರ ಅಷ್ಟೊಂದು ಬೀದಿಗೆ ಇಳಿಯದ ಜನ ಸೋಮವಾರ ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿ ಹೆಸರಿನಲ್ಲಿ ರಸ್ತೆಗಿಳಿದರೆ, ಮತ್ತೆ ಕೆಲವರು ದಿನವಿಡೀ ಪೆಟ್ರೋಲ್ ಬಂಕ್‌ನಲ್ಲಿ ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ಊರು ಸುತ್ತುವಂಥ ಕಾರ್ಯದಲ್ಲಿ ತಲ್ಲೀನರಾಗಿದ್ದರು. ಅಗತ್ಯ ವಸ್ತುಗಳ ಖರೀದಿಗೆಂದು ಬೆಳಗ್ಗೆ 6 ರಿಂದ 10ರವೆಗೆ ಕಾಲಾವಕಾಶ ನೀಡಲಾಗಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಹಣ್ಣು, ಸೊಪ್ಪು, ತರಕಾರಿ, ಖರೀದಿಗೆ ಜನದಟ್ಟನೆ ಕಂಡು ಬಂದರೆ, ದಿನಸಿ ಅಂಗಡಿಗಳ ಮುಂದೆಯೂ ಸಾಮಾಜಿಕ ಅಂತರವನ್ನೇ ಮರೆತು ಜನರು ಖರೀದಿಯಲ್ಲಿ ತಮ್ಮಷ್ಟಕ್ಕೆ ತಾವು ಮಗ್ನರಾಗಿದ್ದರು.
ಇಡೀ ಜಿಲ್ಲೆ ಕೊರೋನಾ ಸೋಂಕಿನ ರಣಕೇಕೆ ನಲುಗುತ್ತಿದೆ. ಆದರೆ ಜನರಿಗೆ ಮಾತ್ರ ಅದ್ಯಾವುದರ ಕನಿಷ್ಠ ಜ್ಞಾನ ಇಲ್ಲ. ನಗರದ ಚನ್ನಮ್ಮ ವೃತ್ತ, ಖಡೇಬಜಾರ್, ಗಣಪತಿ ಗಲ್ಲಿ, ಎಪಿಎಂಸಿ, ಶಿವಾಜಿನಗರ, ಗಾಂಧಿನಗರ ಸೇರಿದಂತೆ ಎಲ್ಲ ವೃತ್ತಗಳಲ್ಲಿ ಸೋಂಕಿನ ಭಯ ಇರಲಿ, ಕನಿಷ್ಠ ಪೊಲೀಸ್ ಭೀತಿಯೂ ಇಲ್ಲದೆ ಜನರ ಸುತ್ತಾಟ ಜೋರಾಗಿತ್ತು. ಕಳೆದ ಎರಡು ದಿನಗಳಿಂದ ಮನೆ ಬಿಟ್ಟು ಹೊರಗೆ ಬಾರದ ಜನ ಮಂಗಳವಾರ ಇಡೀ ಊರು ಸುತ್ತವ ಮೂಲಕ ವೈರಸ್ ಹರಡಲು ಮತ್ತೊಂದಿಷ್ಟು ಕಾರಣರಾದರು. ಲಾಕ್‌ಡೌನ್ ಇದೆಯೋ, ಇಲ್ಲವೋ ಕೊರೋನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದಿಯೋ ಇಲ್ಲವೋ ಎನ್ನುವ ಅನುಮಾನ ಸಹಜವಾಗಿ ಮೂಡುವಂತೆ ಜನರ ಓಡಾಟ, ಸುತ್ತಾಟ, ವಾಹನಗಳ ಸಂಚಾರವು ಕಂಡು ಬಂತು.