ಬೆಳಗಾವಿ : ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯಲ್ಲಿ ಕೋವಿಡ್-19 ಉಪಚಾರ ವಾರ್ಡನಲ್ಲಿ ರೋಗಿಗಳ ಸಹಾಯಕರು ಅನಧಿಕೃತವಾಗಿ ಪ್ರವೇಶ ಹೊಂದುತ್ತಿರುವದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಇಂತಹ ಅನಧೀಕೃತ ಪ್ರವೇಶದಿಂದಾಗಿ ರೋಗಿಗಳ ಸಹಾಯಕರು ಕೋವಿಡ್-19ಕ್ಕೆ ತುತ್ತಾಗಿ ಅವರು ಯಾವುದೇ ಶಿಷ್ಟಾಚಾರ ಪಾಲಿಸದೇ ಇರುವದರಿಂದ ಇತರರಿಗೂ ಸೋಂಕು ಹರಡುತ್ತಲಿದೆ. ಇದರಿಂದಾಗಿ ಯಾವುದೇ ನಿಯಂತ್ರಣ ಸಾಧಿಸಲು ಆಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಇದೇ ರೀತಿ ರೋಗಿಗಳ ಸಹಾಯಕರು ಅನಧಿಕೃತ ಪ್ರವೇಶ ಮುಂದುವರೆಸಿದಲ್ಲಿ ಸಾಂಕ್ರಾಮಿಕ ಇನ್ನಷ್ಟು ಉಲ್ಬಣಗೊಂಡು, ಜಿಲ್ಲಾ ಆಡಳಿತ ಸಾಂಕ್ರಾಮಿಕ ತಡೆಯಲು ಜರುಗಿಸಿದ ಕ್ರಮಗಳು ವಿಫಲವಾಗುವವು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಪ್ರವೇಶಕ್ಕೆ ಪೂರ್ವಾನುಮತಿ ಕಡ್ಡಾಯ : ರೋಗಿಗಳ ಸಹಾಯಕರು ರೋಗಿಗಳ ಸಂದಿಗ್ಧ ಸ್ಥಿತಿಯಲ್ಲಿ ಒಳಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಬಿಮ್ಸ್ ನ ಸಮನ್ವಯ ಅಧಿಕಾರಿಗಳ ಬಳಿ ಪೂರ್ವಭಾವಿ ಅನುಮತಿ ಪಡೆಯಬೇಕು.
ಕಾರಣ ಸಮಸ್ತ ರೋಗಿಗಳ ಸಹಾಯಕರು, ಸಮಯ, ಸಂದರ್ಭ, ಸನ್ನಿವೇಶ ಹಾಗೂ ವಸ್ತುಸ್ಥಿತಿ ಅರಿತು, ಸಮಸ್ತ ಆಸ್ಪತ್ರೆಯ ಸಿಬ್ಬಂದಿಯವರ ಕೂಡ ಸಹಕರಿಸಬೇಕೆಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
ಅಹಿತಕರ ವಿಷಯಗಳಲ್ಲಿ ಸಂಸ್ಥೆಯ ಸಿಬ್ಬಂದಿ ಭಾಗಿಯಾಗಿರುವುದಿಲ್ಲ: ಸಂಸ್ಥೆಯ ಆವರಣದಲ್ಲಿ ಕೆಲವೊಂದು ಅನಧೀಕೃತ ಅಂಬ್ಯೂಲನ್ಸ್ , ಶವವಾಹನಗಳು ಹಾಗೂ ಆಟೋಗಳು ಪ್ರವೇಶವಾಗುತ್ತಿವೆ. ಅನಾವಶ್ಯಕ ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶವಾಗಾರದ ಹತ್ತಿರ ಗೊಂದಲ ಮಾಡುತ್ತಿದ್ದು ಇದರಿಂದ ಸಾರ್ವಜನಿಕರಲ್ಲಿ ತಪ್ಪು ತಿಳುವಳಿಕೆ ಆಗುತ್ತಿದೆ.
ಇದರಲ್ಲಿ ನೊಂದ ರೋಗಿಗಳ ಸಹಾಯಕರ ಮೃತದೇಹ ಇತ್ಯಾದಿಗಳನ್ನು ಸಾಗಿಸಲು ಹೆಚ್ಚುವರಿ ಮೊತ್ತ ಪಡೆಯುತ್ತಿರುವ ಕುರಿತು ಸಾಕಷ್ಟು ದೂರುಗಳು ದಾಖಲಾಗಿರುತ್ತವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಸಂಸ್ಥೆಯ ಸಿಬ್ಬಂದಿಯವರೇ ಒಳಗೊಂಡಿದ್ದಾರೆ ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಇಂತಹ ಅಹಿತಕರ ವಿಷಯಗಳಲ್ಲಿ ಸಂಸ್ಥೆಯ ಸಿಬ್ಬಂದಿಯವರು ಒಳಗೊಂಡಿರುವದಿಲ್ಲ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಸಾರ್ವಜನಿಕರಿಗೆ ಸ್ಪಷನೆ ನೀಡಿದ್ದಾರೆ.
ಅನಧೀಕೃತ ವಾಹನಗಳ ಪ್ರವೇಶಕ್ಕೆ ನಿರ್ಬಂಧ : ಸಂಸ್ಥೆಯ ಆವರಣದಲ್ಲಿ ಕೆಲವೊಂದು ಅನಧೀಕೃತ ಅಂಬ್ಯೂಲನ್ಸ್ , ಶವವಾಹನಗಳು ಹಾಗೂ ಆಟೋಗಳು ಪ್ರವೇಶವಾಗುತ್ತಿವೆ. ಅನಾವಶ್ಯಕ ಹೊರರೋಗಿ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶವಾಗಾರದ ಹತ್ತಿರ ಗೊಂದಲ ಮಾಡುತ್ತಿವೆ. ಆದ್ದರಿಂದ ಅನಧೀಕೃತ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಒಂದು ವೇಳೆ ಯಾವುದೇ ಅನಧಿಕೃತ ವಾಹನಗಳ ಪ್ರವೇಶ ಕಂಡುಬಂದಲ್ಲಿ ಅಂಥವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು. ಆದ್ದರಿಂದ ಖಾಸಗಿ ವಾಹನಗಳ ಮಾಲಿಕರು ಹಾಗೂ ಆಟೋ ಚಾಲಕರು ಈ ಕಾರ್ಯದಲ್ಲಿ ಸಾರ್ವಜನಿಕ ಹಿತ-ದೃಷ್ಟಿಯಿಂದ ಸಹಕರಿಸಬೇಕು ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.