ಗ್ರಾಮೀಣ ಭಾಗದಲ್ಲೂ ಕೊವೀಡ್ ತಪಾಸಣೆ: ಡಿಸಿ‌ ಹಿರೇಮಠ

  • 14 Jan 2024 , 7:36 PM
  • Belagavi
  • 101

ಬೆಳಗಾವಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್) ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಹುಲ್ಲೊಳ್ಳಿ ಹಾಗೂ‌ ಹತ್ತರಗಿ ಗ್ರಾಮದಲ್ಲಿ ಸೋಮವಾರ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ರ್ಯಾಟ್)ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್ ತ್ವರಿತ ಪತ್ತೆಗಾಗಿ ಎಲ್ಲ ಗ್ರಾಮಗಳಲ್ಲಿ ರ್ಯಾಟ್ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ದಿನವೇ (ಮೇ 24) ಜಿಲ್ಲೆಯ 135 ಗ್ರಾಮಗಳಲ್ಲಿ ಏಕಕಾಲಕ್ಕೆ ರ್ಯಾಟ್ ಶಿಬಿರ ನಡೆಸಲಾಗಿದೆ.

ಉಳಿದ ಗ್ರಾಮಗಳಲ್ಲೂ ಕೂಡ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ನಡೆಸಲಾಗುವುದು. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಗ್ರಾಮ ಪಂಚಾಯತಿ ಟಾಸ್ಕ್ ಫೋರ್ಸ್ ಮೂಲಕ ರ್ಯಾಟ್ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆ ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲಿಯೇ ಕೋವಿಡ್ ಪರೀಕ್ಷೆಯನ್ನು ಆರಂಭಿಸಲಾಗಿದೆ.

ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಆಯಾ ಗ್ರಾಮಗಳಲ್ಲಿಯೇ ಪರೀಕ್ಷಿಸಲಾಗುವುದು. ರ್ಯಾಟ್ ನಲ್ಲಿ ಸೋಂಕು ದೃಢಪಟ್ಟರೆ ಅಂತಹವರನ್ನು ತಕ್ಷಣವೇ ಸ್ಥಳೀಯ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Read All News