ಬೆಳಗಾವಿ :ಆಂತರಿಕವಾಗಿ ಯಾವುದೇ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ನಾಲ್ಕೈದು ದಿನಗಳಲ್ಲಿ ಬಗೆಹರಿಸಿಕೊಂಡು ಜನರಿಗೆ ಉತ್ತಮ ಚಿಕಿತ್ಸೆಯನ್ನು ನೀಡಬೇಕು. ಒಂದು ವೇಳೆ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಬೇರೆ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಚ್ಚರಿಕೆಯನ್ನು ನೀಡಿದರು.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಬೇರೆ ಜಿಲ್ಲೆಗಳಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಹೋಲಿಕೆ ಮಾಡಿದಾಗ ಇಲ್ಲಿ ಸಮರ್ಪಕವಾಗಿ ನಿರ್ವಹಣೆ ಇಲ್ಲ. ಐಸಿಯು ಕೂಡ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಸಮಾಧಾನ ವ್ಯಕ್ತಪಡಿಸಿದರು.
ವಾರ್ಡುಗಳು ಮತ್ತು ಐಸಿಯು ಗಳಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷಿಸಲಾಗಿದೆ ಎಂದು ಬಿಮ್ಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೋವಿಡ್ ಸೋಂಕಿನಿಂದ ಸಾವು-ಬದುಕಿನ ಮಧ್ಯೆ ಸೆಣಸಾಡುತ್ತಿರುವ ಜನರು ಬಿಮ್ಸ್ ದಾಖಲಾಗುತ್ತಾರೆ. ಅವರಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅಂತಹವರ ಶಾಪ ನಮ್ಮೆಲ್ಲರಿಗೂ ತಟ್ಟುತ್ತದೆ. ಸರಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಸರಿಯಾದ ಚಿಕಿತ್ಸೆ ನೀಡದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಕೋವಿಡ್ ಸಂದರ್ಭದಲ್ಲಿ ಹುಬ್ಬಳ್ಳಿಯ ಕಿಮ್ಸ್ ಇಡೀ ರಾಜ್ಯಕ್ಕೆ ಮಾದರಿ ಕೆಲಸ ಮಾಡುತ್ತಿದೆ. ಇದೇ ರೀತಿ ಬಿಮ್ಸ್ ಕೂಡ ಕೆಲಸ ಮಾಡಬೇಕು ಎಂಬುದು ಸರಕಾರದ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಆಶಯವಾಗಿದೆ.
ಬಿಮ್ಸ್ ನ ಎಲ್ಲ ವಿಭಾಗದ ಮುಖ್ಯಸ್ಥರು ಸಮನ್ವಯತೆಯೊಂದಿಗೆ ಕೆಲಸ ಮಾಡಿದರೆ ಮಾತ್ರ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಪಕ್ಕದಲ್ಲಿಯೇ ಮೃತದೇಹವನ್ನು ಮೇಲೆ ಇಟ್ಟರೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಗತಿ ಏನು ಎಂದು ಖಾರವಾಗಿ ಪ್ರಶ್ನಿಸಿದರು. ಒಂದು ವೇಳೆ ಯಾವುದೇ ರೋಗಿಯು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರೆ ತಕ್ಷಣವೇ ಮೃತದೇಹವನ್ನು ಪ್ರತ್ಯೇಕ ಕೊಠಡಿಗೆ ಸ್ಥಳಾಂತರಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೂಚನೆ ನೀಡಿದರು.
ಆತಂಕದಲ್ಲಿ ಇರುವ ರೋಗಿಗಳನ್ನು ಮಾತನಾಡಿಸಿ ಅವರ ಮನೋಬಲವನ್ನು ಹೆಚ್ಚಿಸುವುದು ವೈದ್ಯಕೀಯ ಮನೋಧರ್ಮ. ಎಲ್ಲರೂ ವೈದ್ಯಕೀಯ ಮನೋಧರ್ಮ ಪ್ರದರ್ಶಿಸುವ ಮೂಲಕ ರೋಗಿಗಳ ಪ್ರಾಣರಕ್ಷಿಸಬೇಕು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕೈಮುಗಿದು ಹೇಳಿದರು. ಜಿಲ್ಲೆಯ ಸಾಮಾನ್ಯ ವ್ಯಕ್ತಿಯಾಗಿ ಹೀಗೆ ಕೈಮುಗಿದು ಹೇಳುತ್ತೇನೆ. ಜನರ ಪ್ರಾಣರಕ್ಷಣೆಗೆ ವೈದ್ಯರು ಮುಂದಾಗಬೇಕು ಎಂದರು.
ಸಿಸಿಟಿವಿ ಅಳವಡಿಕೆಗೆ ಸೂಚನೆ: ಪ್ರತಿದಿನ ಮೂರು ಪಾಳಿಗಳ ಆಧಾರದ ಮೇಲೆ ವೈದ್ಯರು, ಇತರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಬೇಕು. ಎಲ್ಲ ವಾರ್ಡುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಮೂರು ಪಾಳಿಗಳಲ್ಲಿ ಎಲ್ಲರೂ ನಿಗದಿತ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನಿಗಾ ವಹಿಸಲು ಹಿರಿಯ ಅಧಿಕಾರಿಗಳ ತಂಡ ರಚಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಮ್ಸ್ ಬೇಡಿಕೆಗೆ ಅನುಗುಣವಾಗಿ ಭದ್ರತಾ ಸಿಬ್ಬಂದಿ ಸೇರಿದಂತೆ ಇತರೆ ಸಿಬ್ಬಂದಿಯನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಆದಾಗ್ಯೂ ಕೋವಿಡ್ ವಾರ್ಡುಗಳಲ್ಲಿ ಸೋಂಕಿತರ ಸಹಾಯಕರು ಕಂಡುಬರುತ್ತಿರುವುದು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಮರಣ ಹೊಂದಿರುವ ವ್ಯಕ್ತಿಗಳ ಮೃತದೇಹವನ್ನು ಯಾವುದೇ ಕಾರಣಕ್ಕೂ ವಾರ್ಡುಗಳಲ್ಲಿ ಇತರೆ ರೋಗಿಗಳ ಜತೆ ಇರಿಸಬಾರದು ಎಂದು ಸೂಚನೆ ನೀಡಿದರು.
ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಹೆಚ್ಚಿನ ಆಕ್ಸಿಜನ್ ಪೂರೈಕೆ ಮಾಡಲು ಅನುಕೂಲವಾಗಲಿ ಎಂಬ ಉದ್ಧೇಶದಿಂದ ಆಕ್ಸಿಜನ್ ಘಟಕ ಸಮೀಪದ ಹಳೆ ವಾರ್ಡುಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಾರ್ಡುಗಳಲ್ಲಿ ಮಾತ್ರ ಸ್ವಚ್ಛತೆ ಸಮಸ್ಯೆಯಿದೆ. ಆದರೆ ದೂರವಿರುವ ಹೊಸ ವಾರ್ಡುಗಳಲ್ಲಿ ಸ್ವಚ್ಛತೆ ಸಮಸ್ಯೆ ಇಲ್ಲ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ವಿವರಿಸಿದರು. 60-70 ವರ್ಷಗಳ ಹಳೆಯ ಕಟ್ಟಡಗಳಿರುವುದರಿಂದ ನಿರ್ವಹಣೆ ಸ್ವಲ್ಪಮಟ್ಟಿಗೆ ಕಷ್ಟವಾಗುತ್ತಿದೆ ಎಂದು ತಿಳಿಸಿದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ ಹಾಗೂ ಬಿಮ್ಸ್ ನ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.