ಸಿಎಂ ಬದಲಾವಣೆಗೆ ಈಗ ಕಾಲ ಕೂಡಿ ಬಂದಿರಬಹುದು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

  • 15 Jan 2024 , 1:22 AM
  • Belagavi
  • 94

ಗೋಕಾಕ: "ಮುಖ್ಯಮಂತ್ರಿಗಳ ಬದಲಾವಣೆಗೆ ಬಿಜೆಪಿಯಲ್ಲಿ 6 ತಿಂಗಳಿನಿಂದಲೇ ಆಂತರಿಕವಾಗಿ ಪ್ರಯತ್ನಗಳು ನಡೆಯುತ್ತಿದ್ದವು. ಅನೇಕ ಶಾಸಕರು ಬಹಿರಂಗವಾಗಿಯೇ ಈ ಬಗ್ಗೆ ಹೇಳಿಕೆಯನ್ನೂ ನೀಡಿದ್ದರು. ಬಹುಶಃ ಸಿಎಂ ಬದಲಾವಣೆಗೆ ಈಗ ಕಾಲ ಕೂಡಿ ಬಂದಿರಬಹುದು" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾರ್ಮಿಕವಾಗಿ ಹೇಳಿದರು.

ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದರೂ ನಮ್ಮ ಪಕ್ಷಕ್ಕೆ ಲಾಭವಿದೆ. ನೀಡದಿದ್ದರೂ ನಮಗೆ ಲಾಭವಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನೇರವಾಗಿ ಚುನಾವಣೆಯೇ ನಮ್ಮ ಗುರಿ:"ರಾಜೀನಾಮೆ ನೀಡುವುದು, ಬಿಡುವುದು ಅವರ ಪಕ್ಷದ ಆಂತರಿಕ ವಿಚಾರ. ರಾಜೀನಾಮೆ ಕೊಡುವುದು, ಹೊಸ ಮುಖ್ಯಮಂತ್ರಿ ನೇಮಿಸುವುದು ಅವರಿಗೆ ಬಿಟ್ಟಿದ್ದು. ಇದರಿಂದ ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನೇರವಾಗಿ ಮುಂಬರುವ ವಿಧಾನಸಭೆ ಚುನಾವಣೆಯೊಂದೇ ನಮ್ಮ ಗುರಿ" ಎಂದು ಸತೀಶ ತಿಳಿಸಿದರು.

"ಪಕ್ಷದ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವಲ್ಲಿ ವಿಫಲವಾಗಿರುವುದು ಹಾಗೂ ಸೂಕ್ತ ರೀತಿಯಲ್ಲಿ ಕೋವಿಡ್ ನಿರ್ವಹಣೆ ಮಾಡದೇ ಇರುವುದು ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಕಾರಣ ಇರಬಹುದು. ಇದು ರಾಜ್ಯದ ಜನರಿಗೆ ಗೊತ್ತಿದೆ" ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Read All News