ಬೆಳಗಾವಿ: ಕೊರೊನಾದಂತಹ ಈ ಸಂಕಷ್ಟದ ಸಮಯದಲ್ಲಿ ಕಳೆದ ಒಂದೂವರೇ ವರ್ಷದಿಂದ ಸದ್ದಿಲ್ಲದೆ ಜನರ ಸೇವೆ ಮಾಡುತ್ತ ಅದರಲ್ಲೇ ಧನ್ಯತೆ ಕಂಡ ಕರ್ನಾಟಕದ ಬೆರಳೆಣಿಕೆಯ ಧೀಮಂತ ನಾಯಕರಲ್ಲಿ ಜನಾಭಿಮಾನಕ್ಕೆ ಪಾತ್ರರಾಗಿ ಪೂಜಿಸಲ್ಪಟ್ಟ, ಜನರ ಹಾರೈಕೆಗಳಲ್ಲಿ ಆಶೀರ್ವಾದದಲ್ಲಿ ಬಹುಪಾಲು ಗೆದ್ದ ನಾಯಕ ಮಾತ್ರ ಅಥಣಿಯ ಶ್ರೀ ಶಿವಯೋಗಿಗಳ ಪರಮ ಭಕ್ತ, ಉತ್ತರ ಕರ್ನಾಟಕದ ಜನರ ನಾಯಕ ಲಕ್ಷ್ಮಣ ಸವದಿಯವರು ಎಂಬುದು ವಾಸ್ತವ.
ಅತ್ಯಂತ ಸರಳ ನಡೆನುಡಿ, ಸರಳ ವ್ಯಕ್ತಿತ್ವದ ಧೀಮಂತ ವ್ಯಕ್ತಿಯಾಗಿರುವ ಸವದಿಯವರು ಪ್ರಚಾರದ ಹಂಗಿಲ್ಲದೆ, ತೆರೆಮರೆಯ ಕಾಯಿಯಂತೆ ತನ್ನ ಸೇವಾ ಕಾರ್ಯಗಳಿಂದಲೇ ಜನರ ಪ್ರೀತಿ ವಿಶ್ವಾಸ ಗಳಿಸಿ, ಮನೆಯ ಮಗನಂತೆ ಪ್ರತಿ ಮನೆ ಹಾಗು ಮನ ತಲುಪಿದವರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸವದಿಯವರ ಸಂಘಟನಾ ಚಾತುರ್ಯ ಹಾಗೂ ಸೇವಾಕಾರ್ಯಗಳಿಂದಾಗಿ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೆಂವ ಘನವೆತ್ತ ಹುದ್ದೆ ಸಹಜವಾಗಿಯೇ ಒದಗಿ ಬಂತು.
ಅಂದಿನಿಂದ ಇಲ್ಲಿಯವರೆಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಹುದ್ದೆಯನ್ನೂ ಮೀರಿ ಸೇವಾಕಾರ್ಯದಲ್ಲಿ ನಿರತರಾಗಿ, ತನ್ನ ಹುದ್ದೆಗೆ ಸ್ವಲ್ಪವೂ ಕಪ್ಪು ಚುಕ್ಕೆ ಬಾರದಂತೆ, ವಿವಾದಾತ್ಮಕ ಹೇಳಿಕೆಗಳಿಗೆ ಸಿಲುಕದೆ ತನ್ನ ಘನತೆಯನ್ನು ಕಾಪಾಡಿಕೊಂಡು, ಸಮರ್ಥವಾಗಿ, ಯಶಸ್ವಿಯಾಗಿ ಜನಸೇವೆ ದುಡಿದು ಜನಮೆಚ್ಚಿನ ಸಾಹುಕಾರರಾದರು.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾದಾಗ ಜನರೊಂದಿಗೆ ಇದ್ದುಕೊಂಡು ತುರ್ತು ಕೆಲಸ ಕಾರ್ಯಗಳಲ್ಲಿ ತೊಡಗಿ ನೆರೆಸಂತ್ರಸ್ಥರ ಸಂಕಷ್ಟಕ್ಕೆ ಧ್ವನಿಯಾದರು. ಇಂತಹ ಜನಮೆಚ್ಚುವ ಕಾರ್ಯಗಳಿಂದಲೇ ಮನೆಮಾತಾಗಿರುವ ಸವದಿಯವರು ಕೊರೊನಾ ಮೊದಲ ಅಲೆಯ ಸಂದರ್ಭ ಇಡೀ ದೇಶದಲ್ಲೇ ಲಾಕ್‌ಡೌನ್ ಘೋಷಿಸಿದಾಗ ತಮ್ಮ ಮಾದರಿ ಕಾರ್ಯಕ್ರಮಗಳ ಮೂಲಕ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದಾಗ ಸ್ವತಃ ಅಮಿತ್ ಶಾ ಅವರೇ ಸವದಿಯವರ ಸಾಧನೆಗೆ ಮೆಚ್ಚಿ ಶ್ಲಾಘಿಸಿದರು. ಕೊರೊನಾ ಮೊದಲ ಅಲೆಯನ್ನು ತಡೆಗಟ್ಟಲು ಕಳೆದ ವರ್ಷ ಸನ್ಮಾನ್ಯ ಪ್ರಧಾನಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ್ದು ನಮಗೆಲ್ಲ ತಿಳಿದಿದೆ. ಆ ಸಂಧರ್ಭದಲ್ಲಿ ವಾಹನಗಳು ರಸ್ತೆಗೆ ಇಳಿಯುವಂತಿರಲಿಲ್ಲ.
ಈ ವೇಳೆ ವಲಸೆ ಕಾರ್ಮಿಕರು, ಪರ ಊರಲ್ಲಿ ಕೆಲಸ ಮಾಡುವವರನ್ನು ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ ಬಸ್ಸಿನಿಂದ ಅವರ ತವರೂರಿಗೆ ಕಳುಹಿಸುವ ಜವಾಬ್ದಾರಿ ಹೊತ್ತು ಒಂದು ವಾರದ ಅವಧಿಯಲ್ಲಿ ಬಹುತೇಕ ವಲಸಿಗರು ತಮ್ಮ ತಮ್ಮ ಊರು ಸೇರುವಂತೆ ವ್ಯವಸ್ಥೆ ರೂಪಿಸಿ ಸವದಿಯವರು ಯಶಸ್ವಿಯಾದರು.
ಲಾಕ್‌ಡೌನ್ ಆರಂಭದಲ್ಲಿ ಸೇವಾ ಸರಕು ವಾಹನ, ಅಂಬ್ಯುಲೆನ್ಸ್, ಅಗ್ನಿಶಾಮಕ, ಭದ್ರತಾ ವಾಹನಗಳಿಗೆ ವಿನಾಯಿತಿ ನೀಡಿ ತುರ್ತು ಅಗತ್ಯ ಹಾಗೂ ಆರೋಗ್ಯ ಸೇವೆಗಳು ವ್ಯತ್ಯಯವಾಗದಂತೆ ನೋಡಿಕೊಂಡರು.
ಖಾಸಗಿ ಬಸ್‌ಗಳ ಸರಕಾರಕ್ಕೆ ಸರೆಂಡರ್ ಮಾಡಿಸಿ ಮಾಲಿಕರು ತೆರಿಗೆ ಕಟ್ಟುವ ಭಾರವನ್ನು ಹಗುರಾಗಿಸಿದರು.
ರೈತರಿಗೆ ನೆರವಾಗಲು ಸಾರಿಗೆ ಇಲಾಖೆಯಿಂದ 24/7 ಕಂಟ್ರೋಲ್ ರೂಂ ತೆರೆದು ಅದರಲ್ಲಿ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು.
'ಸಾರಿಗೆ ಸಂಜೀವಿನಿ' ಮೊಬೈಲ್ ಸ್ಯಾನಿಟೈಸರ್ ಬಸ್ ಎನ್ನುವ ವಿಶಿಷ್ಠ ಪರಿಕಲ್ಪನೆ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದರು. ಈ ಮಾದರಿಯನ್ನು ದೇಶದ ಹಲವು ರಾಜ್ಯಗಳಲ್ಲಿ ಅಳವಡಿಸಿದರು.
ಕೊರೊನಾ ತ್ವರಿತವಾಗಿ ಪತ್ತೆಹಚ್ಚಲು ರಾಜ್ಯಾದ್ಯಂತ ಮೊಬೈಲ್ ಪೀವರ್ ಕ್ಲಿನಿಕ್ ಬಸ್ ಆರಂಭಿಸಿ ಕೊರೊನಾ ತ್ವರಿತ ಪತ್ತೆಗೆ ಸಹಕಾರಿಯಾಗಿ ಸೋಂಕು ಹರಡದಂತೆ ನೋಡಿ ಚಿಕಿತ್ಸೆ ಶೀಘ್ರ ಸಿಗುವಂತಾಗಲು ನೆರವಾದರು.
ಸಾರಿಗೆ ನಷ್ಟವನ್ನು ಸರಿದೂಗಿಸಿ ಲಾಭ ತರಲು ಅಧಿಕಾರಿಗಳಿಗೆ ಸೂಚಿಸಿ ಅದರಲ್ಲಿ ಯಶಸ್ವಿಯಾದರು.
ಕಳೆದ ವರ್ಷ ಲಾಕ್ ಡೌನ್‌ನಿಂದ ಸಾರಿಗೆ ಬಸ್‌ಗಳು ರಸ್ತೆಗಿಳಿಯದಿದ್ದರೂ ಸಾರಿಗೆ ಸಿಬ್ಬಂದಿಗೆ ಸಂಪೂರ್ಣ ವೇತನ ನೀಡಿ ನೆರವಾದರು.
ಕಳೆದ ವರ್ಷ ಲಾಕ್‌ಡೌನ್‌ನಿಂದ ರಸ್ತೆಗಿಳಿಯದ ಆಟೋ ಟಾಕ್ಸಿಯಂತಹ ಸಾರಿಗೆ ಹಾಗೂ ಗೂಡ್ಸ್ ವಾಹನಗಳ ಚಾಲಕ ಮಾಲಕರಿಗೆ ರೂ.5000 ಪರಿಹಾರ ಒದಗಿಸಿಕೊಟ್ಟರು.
ಲಾಕ್ಡೌನ್ ಸಂದರ್ಭ ಸಾರಿಗೆ ನಷ್ಟ ಸರಿದೂಗಿಸಲು ಹಲವು ಉಪಕ್ರಮಗಳನ್ನು ಅಳವಡಿಸಿ ಸಾರಿಗೆ ಇಲಾಖೆಯನ್ನು ನಷ್ಟದಿಂದ ಪಾರು ಮಾಡಿದರು.
ಸಾರಿಗೆ ನೌಕರರ ಮುಷ್ಕರದ ಹೆಸರಲ್ಲಿ ರಾಜಕೀಯ ಸವಾಲುಗಳಿಂದ ಸಾಕಷ್ಟು ಒತ್ತಡ ಉಂಟಾದರೂ ಬಸ್‌ಗಳು ರಸ್ತೆಗಿಳಿಯದೇ ಇದ್ದಾಗ ಖಾಸಗಿ ಬಸ್‌ಗಳನ್ನು ಇಳಿಸಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೆರವಾದರು.
ಇದು ಕೋವಿಡ್ ಮೊದಲನೇ ಅಲೆಯಲ್ಲಿ ಸವದಿಯವರು ಮಾಡಿದ ಸೇವೆಯ ವಿವರವಷ್ಟೇ, ಅದೇರೀತಿ ಪ್ರಸ್ತುತ ಕೋವಿಡ್ ಎರಡನೇ ಅಲೆಯಲ್ಲಿ ಮತ್ತೆ ನಾಲ್ಕು ಹೆಜ್ಜೆ ಮುನ್ನಡೆದ ಸವದಿಯವರು ಕೊರೊನಾ ಯೋಧರಾಗಿ ತಮ್ಮನ್ನು ತಾವು ಜನಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ.
ದೇಶ ಕೋವಿಡ್ ನಂತಹ ಯುದ್ಧದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗಲೇ ಸಮಯೋಚಿತವಲ್ಲದ ಸಾರಿಗೆ ನೌಕರರ ಮುಷ್ಕರದ ನಡೆಯಿತು. ಆ ಮುಷ್ಕರದ ಬೆನ್ನಲ್ಲೇ ಕೋವಿಡ್ ಎರಡನೇ ಅಲೇ ಸೃಷ್ಟಿಯಾದಾಗ ರಾಜ್ಯವನ್ನು ಲಾಕ್‌ಡೌನ್ ಮಾಡುವ ಅನಿವಾರ್ಯತೆ ಎದುರಾಯಿತು. ರಾಜ್ಯ ಸಾರಿಗೆ ವಾಹನಗಳು ರಸ್ತೆಗಿಳಿಯದ ಪರಿಸ್ಥಿತಿಯದು. ಈ ಪರಿಸ್ಥಿತಿಯಲ್ಲಿ ಜನತಾ ಕರ್ಫ್ಯೂ ಘೋಷಣೆಯಾದ ಕೂಡಲೆ ಸವದಿಯವರು ಖಾಸಗಿ ವಾಹನಗಳನ್ನು ರಸ್ತೆಗಿಳಿಸಿ ಪ್ರಯಾಣಿಕರು ತಮ್ಮ ಊರಿಗೆ ಮರಳಲು ವ್ಯವಸ್ಥೆ ಮಾಡಿದರು.
ಇದಕ್ಕಾಗಿ 12,000 ಖಾಸಗಿ ವಾಹನಗಳನ್ನು ಗುರುತಿಸಿ ಅವುಗಳಿಗೆ ನಿಗದಿತ ಪ್ರಯಾಣದರ ವಿಧಿಸಿ ಜನರು ತಮ್ಮ ಊರುಗಳಿಗೆ ಮರಳುವಂತಹ ಅನುಕೂಲಕರ ವಾತಾವರಣ ಸೃಷ್ಟಿಸಿದರು . ತಾವು ಉಸ್ತುವಾರಿಯಾಗಿರುವ ರಾಯಚೂರು ಜಿಲ್ಲೆಯಲ್ಲಿರುವ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತಕ್ಷಣ ವಶಕ್ಕೆ ಪಡೆದು ಅಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ , ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪ್ಯಾಕೇಜ್ ಹೆಸರಿನಲ್ಲಿ ಹೆಚ್ಚಿನ ಹಣ ವಸೂಲಿ ಮಾಡುವ ದಂಧೆಯನ್ನು ಕೂಡಲೇ ನಿಯಂತ್ರಿಸಬೇಕು ಎಂದು ರಾಯಚೂರು ಜಿಲ್ಲಾಡಳಿತಕ್ಕೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 3 ಹಂತಗಳಲ್ಲಿ ಕೋವಿಡ್ ಪ್ರಕರಣಗಳನ್ನು ಪರಿಗಣಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಸಾಧಾರಣ ರೋಗ ಲಕ್ಷಣ ಇರುವವರನ್ನು ಹೋಂ ಕ್ವಾರೆಂಟೈನ್ಗೆ ಕಳುಹಿಸಿ ಅವರ ಮೇಲೆ ನಿಗಾ ವಹಿಸುವಂತೆ. ರೋಗ ಲಕ್ಷಣದ ಗಂಭೀರತೆಯ ಆಧಾರದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡು ಅವರಿಗೆ ಚಿಕಿತ್ಸೆ ನೀಡುವಂತೆ .
ರೋಗ ಲಕ್ಷಣವು ತೀವ್ರವಾಗಿ ಕಂಡುಬಂದವರಿಗೆ ಆಕ್ಸಿಜನ್, ಐಸಿಯು ವ್ಯವಸ್ಥೆ, ವೆಂಟಿಲೇಟರ್ ಒದಗಿಸುವುದು ಮತ್ತು ರೆಮಿಡಿಸಿವರ್ ಔಷಧವನ್ನು ಅಗತ್ಯಕ್ಕನುಗುಣವಾಗಿ ನೀಡುವಂತೆ ವ್ಯವಸ್ಥೆ ರೂಪಿಸಿ, ಯಾವುದೇ ಕಾರಣಕ್ಕೂ ಆಕ್ಸಿಜನ್ ಮತ್ತು ರೆಮಿಡಿಸಿವರ್ ಔಷಧಗಳ ಕೃತಕ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸಿದರು. ಇನ್ನೂ ಮುಂದುವರಿದು ಒಬ್ಬ ತಂತ್ರಜ್ಞನಂತೆ ಸಾರಿಗೆ ನಿಗಮಗಳ ಬಸ್‌ಗಳನ್ನು ಮೊಬೈಲ್ ಫೀವರ್ ಕ್ಲಿನಿಕ್ ಬಸ್‌ಗಳನ್ನಾಗಿ, ಕೋವಿಡ್ ಟೆಸ್ಟಿಂಗ್ ವಾಹನಗಳನ್ನಾಗಿ ಮಾರ್ಪಡಿಸಿ ಹಲವು ಜಿಲ್ಲೆಗಳಲ್ಲಿ ಈ ಬಸ್ ಗಳ ಸದುಪಯೋಗವಾಗುವಂತೆ ನೋಡಿಕೊಂಡರು.
ಅದರೊಟ್ಟಿಗೆ ವಾಹನ ತೆರಿಗೆ ಪಾವತಿ ಅವಧಿಯನ್ನು ವಿಸ್ತರಿಸಿದರು. ಆರೋಗ್ಯ ಸೇವೆ ಒದಗಿಸಲು ತಮ್ಮ ನಾಲ್ಕೂ ನಿಗಮಗಳ ಬಸ್‌ಗಳನ್ನು ವಿನಿಯೋಗಿಸಿದರು. ರಾಜ್ಯದಲ್ಲಿ ಇಷ್ಟೆಲ್ಲ ಮಾಡಿದವವರು ತಮ್ಮ ಸ್ವಕ್ಷೇತ್ರ ಹಾಗು ತಾವು ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲೂ ಸಾಕಷ್ಟು ಪರಿಣಾಮಕಾರಿ ಕೆಲಸಗಳನ್ನು ಮಾಡಿದ್ದು ಇಲ್ಲಿ ಗಮನಾರ್ಹ.
ತಮ್ಮ ಜಿಲ್ಲೆಯಲ್ಲಿ ಕೋವಿಡ್ ವಾರಿಯರ್ಸ್‌ನಂತೆ ಕೆಲಸ ಮಾಡುವ ಬೆಳಗಾವಿಯ ಪತ್ರಕರ್ತರಿಗೆ ಚಿಕಿತ್ಸಾ ಸೌಲಭ್ಯ ಒದಗಿಸಿ, ತನ್ನ ಕ್ಷೇತ್ರ ಅಥಣಿಯಲ್ಲಿ ಆರೋಗ್ಯ ಸೇವೆಗಳು ವ್ಯತ್ಯಯವಾಗದಂತೆ ಮುತುವರ್ಜಿ ವಹಿಸಿ, ರಾಯಚೂರು, ಅಥಣಿಯ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಭೇಡಿ ನೀಡಿ ವ್ಯವಸ್ಥೆಯನ್ನು ಸಜ್ಜುಗೊಳಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸೂಕ್ತ ದರ ನಿಗದಿಪಡಿಸಿ ರಾಯಚೂರಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು. ಅಂಬ್ಯುಲೆನ್ಸ್‌ಗಳಿಗೆ ಸೂಕ್ತ ದರ ನಿಗದಿಪಡಿಸಿದ್ದಷ್ಟೇ ಅಲ್ಲದೆ ಖಾಸಗಿ ಅಂಬ್ಯುಲೆನ್ಸ್‌ಗಳ ಸೇವೆಯನ್ನೂ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದರು.
ಈ ವ್ಯವಸ್ಥೆಗಳನ್ನು ಯಶಸ್ವಿಯಾಗಿ ನಿಭಾಯಿಸಲು ಹಲವಾರು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದನ್ನು ಇಲ್ಲಿ ನೆನೆಯಬಹುದು. ಕೋವಿಡ್ ಮೊದಲನೇ ಅಲೆಯ ವೇಳೆ ಮೊಬೈಲ್ ಫೀವರ್ ಕ್ಲಿನಿಕ್ ಬಸ್ ಗಳನ್ನು ಅಳವಡಿಸಿದ್ದ ಸವದಿ ಈ ಬಾರಿ ಆಕ್ಸಿಜನ್ ಬಸ್ ಅಳವಡಿಸಿ ಯಶಸ್ವಿಯಾದರು.
ಸೋಂಕಿತರು ಆಕ್ಸಿಜನ್ ಗಾಗಿ ಪರಿತಪಿಸುವುದನ್ನು ತಪ್ಪಿಸಲು ಬಿ.ಎಂ.ಟಿ.ಸಿ. ಸಂಸ್ಥೆಯ ವತಿಯಿಂದ ಪ್ರಾಯೋಗಿಕವಾಗಿ ಮೊಬೈಲ್ ಆಕ್ಸಿಜನ್ ಘಟಕ ಆರಂಭಿಸಿದರು. ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿರುವುದರಿಂದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗುವುದನ್ನು ತಪ್ಪಿಸಲು ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸುವ ಈ ನೂತನ ವ್ಯವಸ್ಥೆ ಸಹಕಾರಿಯಾಯಿತು.
ಈ ಕಾರ್ಯಕ್ಕೆ ಫೌಂಡೇಶನ್ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆಯವರು ಸಹಕರಿಸಿ ಈ ಬಸ್ಸಿನಲ್ಲಿ ಆಕ್ಸಿಜನ್ ಸರಬರಾಜು ಮಾಡಿ ಸೇವೆ ನೀಡಲು ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಿದ್ದಾರೆ. ಅದೇ ರೀತಿ ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ 'ಆಕ್ಸಿಜನ್ ಆನ್ ವ್ಹೀಲ್ಸ್' ಬಸ್ಸನ್ನು ಸಜ್ಜುಗೊಳಿಸಿ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇದರಲ್ಲಿ ಒದಗಿಸಲಾಗುತ್ತಿದೆ. ಚಿಕ್ಕಮಗಳೂರು, ಬೆಂಗಳೂರು, ಕೊಪ್ಪಳ, ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಕ್ಸಿಜನ್ ಬಸ್ ಸೇವೆ ಆರಂಭಿಸಿ ಒಂದೇ ಬಸ್ಸಿನಲ್ಲಿ ಏಕಕಾಲಕ್ಕೆ ಒಟ್ಟು 8 ಮಂದಿ ರೋಗಿಗಳಿಗೆ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರದ ಭಾಗವಾಗಿ ಹತ್ತು ಹಲವು ಕಾರ್ಯಗಳನ್ನು ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿದ ಸವದಿಯವರು ವೈಯಕ್ತಿಕವಾಗಿ ಜನಸೇವೆ ಮಾಡುವಲ್ಲಿ ಹಿಂದುಳಿಯಲಿಲ್ಲ. ತಮ್ಮ ಸ್ವ ಕ್ಷೇತ್ರದ ಜನರಿಗಾಗಿ ಅಥಣಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯಲ್ಲಿ ಸುಮಾರು 60 ಹಾಸಿಗೆಗಳುಳ್ಳ ಉಚಿತ ಕೋವಿಡ್ ಕೇರ್ ಸೆಂಟರ್ ಅನ್ನು ತನ್ನ ಸ್ವಂತ 50 ಲಕ್ಷ ರೂಪಾಯಿಯಲ್ಲಿ ಸ್ಥಾಪಿಸಿ ರೋಗಿಗಳ ಪಾಲಿಗೆ ಧನ್ವಂತರಿಯಾದರು.
ಇಲ್ಲಿ ಆಸ್ಪತ್ರೆಗಳಲ್ಲಿ ಬೆಡ್ ಆಕ್ಸಿಜನ್ ಸಿಗದೆ ತೊಂದರೆಗೀಡಾದವರಿಗೆ 10 ಲೀಟರ್ ಹಾಗೂ 15 ಲೀಟರ್ ಸಾಮರ್ಥ್ಯವುಳ್ಳ 50 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಸಿ ವಿತರಿಸಿದರು. ಆ ಆಕ್ಸಿಜನ್ ಕಾನ್ಸಂಟ್ರೇಟರ್ ಕಿಟ್ ಜೊತೆಗೆ ಜ್ವರ ಪರೀಕ್ಷೆ ಮಾಡುವ ಥರ್ಮಾಮೀಟರ್, ಸ್ಯಾಚು ರೇಷನ್ ಹಾಗೂ ಪಲ್ಸ್ ಚೆಕ್ ಮಾಡುವ ಆಕ್ಸಿಮೀಟರ್ ಉಳ್ಳ ಕಿಟ್ ಗಳನ್ನು ಕೂಡ ನೀಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲೇ ಮೊದಲ ಬ್ಲಾಕ್ ಫಂಗಸ್ ಕೇಸ್ ವರದಿಯಾದಾಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದ ಅಥಣಿಯ ತಾಲೂಕ ಪಂಚಾಯಿತಿ ಕಚೇರಿಯಲ್ಲಿ ಉದ್ಯೋಗಿಯಾಗಿದ್ದ ಆನಂದ ಮಹದೇವ ಕುಳಲಿ ಎಂಬವವರನ್ನು ಮಹಾರಾಷ್ಟ್ರದ ಮಿರಜ್ ನಿಂದ ಬೆಂಗಳೂರಿಗೆ ಕರೆಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿ, ಆಸ್ಪತ್ರೆಯ ವೆಚ್ಚವನ್ನು ತಾವೇ ಭರಿಸಿದ ಹೃದಯವಂತ ಲಕ್ಷ್ಮಣ ಸವದಿಯವರು. ತಮ್ಮ ಬೆಳಗಾವಿ ಜಿಲ್ಲೆಯಲ್ಲಿ ಡಿಆರ್‌ಡಿಓ ವತಿಯಿಂದ ಆಸ್ಪತ್ರೆ ನಿರ್ಮಿಸಲು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್‌ಗೆ ಪತ್ರ ಬರೆದು ವಿನಂತಿಸಿದ್ದಲ್ಲದೆ, ಈಗಲೂ ಆ ನಿಟ್ಟಿನಲ್ಲಿ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದಾರೆ.
ಬೆಳಗಾವಿಯ ಬಿಮ್ಸ್ ಸೇರಿ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಸ್ವತಃ ರೋಗಿಗಳ ಜೊತೆ ಕಾಲ ಕಳೆದು ಅವರ ಯೋಗಕ್ಷೇಮ ವಿಚಾರಿಸಿ ‘ನಿಮ್ಮಸೇವೆಗೆನಾನಿದ್ದೇನೆ’ ಎಂಬ ಅಭಯ ನೀಡುವ ಅವರ ಗುಣ ಹಾಗು ಧೈರ್ಯ ಭಗವಂತನೂ ಮೆಚ್ಚುವಂತದ್ದು. ಇಂತಹ ಜನಮೆಚ್ಚಿದ ಜನಸೇವಕ ಸವದಿಯವರ ಮುತುವರ್ಜಿಯಿಂದ ಜನತಾ ಕರ್ಫ್ಯೂವಿನಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಆಟೋ, ಟಾಕ್ಸಿ, ಮಾಕ್ಸಿಕ್ಯಾಬ್ ಚಾಲಕರಿಗೆ ರೂ. 3000 ಪರಿಹಾರ ಸಿಗುತ್ತಿದೆ. ಅಥಣಿಯ ಸುಮಾರು 70,000 ಕುಟುಂಬಗಳ 2.5 ಲಕ್ಷ ಜನರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಒದಗಿಸಿ ಬಡವರ ಹಸಿವು ನೀಗಿಸಿದ್ದಾರೆ.
ಅಥಣಿಯಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗೂ 300 ಬೆಡ್‌ಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಸಾರಿಗೆ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ. ಸಾರಿಗೆ ಸಿಬ್ಬಂದಿಯ ಕುಂದುಕೊರತೆ ಆಲಿಸಲು ಸಹಾಯವಾಣಿ ತೆರೆಯಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ 20 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ಸಂಗ್ರಹ ಘಟಕ ನಿರ್ಮಾಣಗೊಂಡಿದೆ.
ಹೀಗೆಯೇ ಒಂದೆರೆಡವೆನ್ನದೇ ಸವದಿಯವರ ಗಜಗಾತ್ರದ ಅಳಿಲುಸೇವೆ ಸದ್ದಿಲ್ಲದೇ ಸಾಗಿದೆ. ಈ ವಿಷಮ ಘಳಿಗೆಯಲ್ಲಿ ಪರಿಸ್ಥಿತಿ ಪ್ರತಿಯೊಬ್ಬನ ಸತ್ವ ಪರೀಕ್ಷೆ ಮಾಡುತ್ತಿರುವಾಗ ಲಕ್ಷ್ಮಣ ಸವದಿ ಎಂಬ ಅಧಮ್ಯ ಚೇತನವೊಂದು ಒಬ್ಬ ಕಾಯಕ ಯೋಗಿಯಂತೆ, ಜನರ ಸೇವಕನಂತೆ, ಮನೆಯ ಹಿರಿಯ ಮಗನಂತೆ ತನ್ನನ್ನು ನಂಬಿರುವ ಪ್ರತಿ ಜೀವಕ್ಕೂ ಆಶಾಕಿರಣದಂತೆ ಸ್ಪಂದಿಸುತ್ತಿರುವ ರೀತಿ ಮಾತ್ರ ಪ್ರೇರಣಾದಾಯಿ.
ಸವದಿಯವರ ಈ ಸೇವಾ ಮನೋಭಾವಕ್ಕೆ ಆ ಭಗವಂತ ಇನ್ನೂ ಹೆಚ್ಚಿನ ಶಕ್ತಿ, ಸ್ಪೂರ್ತಿ ನೀಡಲಿ. ತಮ್ಮ ಸೇವೆಯಿಂದ, ಕಾಯಕದಿಂದ ಆ ದೃವತಾರೆಯಂತೆ ಬಾನೆತ್ತರದಿ ಲಕ್ಷ್ಮಣ ಸವದಿಯವರ ಕೀರ್ತಿ ಬೆಳಗಲಿ ಎಂಬ ಸದಾಶಯ ನಮ್ಮದು. “ಸರ್ವೇಭವಂತುಸುಖಿನಃ - ಸರ್ವೇಸಂತುನಿರಾಮಯ”
ನಿಮ್ಮ ಮಹಾಂತೇಶವಕ್ಕುಂದಬೆಳಗಾವಿ