ಎಲ್ಲ ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ತಲುಪಿಸಲು ಕ್ರಮ: ಜಿಲ್ಲಾಧಿಕಾರಿ ಹಿರೇಮಠ

  • 12 Jan 2024 , 3:34 AM
  • Belagavi
  • 166

ಬೆಳಗಾವಿ: ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸರಕಾರ ಘೋಷಿಸಿರುವ ಪರಿಹಾರಧನವನ್ನು ಎಲ್ಲ ಅರ್ಹ ಕಾರ್ಮಿಕರಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಸಂಘಟಿತ ಕಾರ್ಮಿಕರಿಗೆ ಪರಿಹಾರಧನ ನೀಡುವ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಅಗಸರು, ಟೈಲರ್, ಹಮಾಲಿ, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್, ಕಮ್ಮಾರರು, ಗೃಹ ಕಾರ್ಮಿಕ(ಮನೆಗೆಲಸದವರು)ರು ಹಾಗೂ ಚಮ್ಮಾರರಿಗೆ 2 ಸಾವಿರ ರೂಪಾಯಿ ಪರಿಹಾರಧನವನ್ನು ಸರಕಾರ ಘೋಷಿಸಿದೆ.

ಅರ್ಹ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. 11 ವಲಯದ ಅಸಂಘಟಿತ ಕಾರ್ಮಿಕರಿಗೆ ಸರಕಾರ ಘೋಷಿಸಿರುವ ನೆರವು ತಲುಪಬೇಕು. ಆಯಾ ಕಾರ್ಮಿಕ ಸಂಘ-ಸಂಸ್ಥೆಗಳು ಅರ್ಹ ಕಾರ್ಮಿಕರು ಆನಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ನೆರವಾಗಬೇಕು.

ಸರಕಾರದ ಮಾರ್ಗಸೂಚಿ ಅನುಸರಿಸಿ ಎಲ್ಲ ಅರ್ಹ ಕಾರ್ಮಿಕರಿಗೆ ನೆರವು ತಲುಪಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.

ಉದ್ಯೋಗ ದೃಢೀಕರಣ ಪತ್ರ ನೀಡಲು ಸೂಚನೆ: ಅರ್ಜಿ ಸಲ್ಲಿಸುವ ಕಾರ್ಮಿಕರಿಗೆ ಸ್ವಯಂಘೋಷಣೆ ಪತ್ರ ಆಧರಿಸಿ ಸಂಬಂಧಿಸಿದ ಅಧಿಕಾರಿಗಳು ಉದ್ಯೋಗ ದೃಢೀಕರಣ ಪತ್ರವನ್ನು ನೀಡಲಿದ್ದಾರೆ. ವಿನಾಕಾರಣ ಸತಾಯಿಸದಂತೆ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಸ್ಥಳೀಯವಾಗಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಇದನ್ನು ಆಧರಿಸಿ ಅವರು ಉದ್ಯೋಗ ದೃಢೀಕರಣ ಪತ್ರ ನೀಡಬೇಕು.

ಉದ್ಯೋಗ ದೃಢೀಕರಣ ಪತ್ರ ನೀಡಲು ಸತಾಯಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ಎಚ್ಚರಿಕೆಯನ್ನು ನೀಡಿದರು.

ಕಾರ್ಮಿಕರಿಗೆ ತಕ್ಷಣವೇ ಉದ್ಯೋಗ ಪ್ರಮಾಣಪತ್ರ ನೀಡಬೇಕು ಎಂದು ಸಂಬಂಧಿಸಿದ ಕಂದಾಯ ಹಾಗೂ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ಸಂಬಂಧಿಸಿದ ಕಾರ್ಮಿಕರ ಸಂಘಟನೆಗಳು ಒಂದೇ ಕಡೆ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಬೇಕು. ಆಗ ಕಾರ್ಮಿಕ ಇಲಾಖೆಯ ಅಧಿಕಾರಿಗಳೇ ಅಂತಹ ಸ್ಥಳಗಳಿಗೆ ಬಂದು ನೆರವು ನೀಡಲಿದ್ದಾರೆ.

ಏಜೆಂಟರ ಮಧ್ಯಸ್ಥಿಕೆಗೆ ಅವಕಾಶ ಬೇಡ: ಸರಕಾರದ ಆರ್ಥಿಕ ನೆರವು ಅರ್ಹ ಕಾರ್ಮಿಕರಿಗೆ ತಲುಪಿಸಲು ಕಾರ್ಮಿಕ ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಏಜೆಂಟರು ಈ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆಯನ್ನು ವಹಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ನೆರವು ತಲುಪಿಸುವುದು ಸುಲಭ ಕೆಲಸವಾಗಿದೆ. ಅದೇ ರೀತಿ ಅಸಂಘಟಿತ ಕಾರ್ಮಿಕರಿಗೆ ಕೂಡ ಮುಂಬರುವ ದಿನಗಳಲ್ಲಿ ಸರಳ ರೀತಿಯಲ್ಲಿ ಅವರ ಖಾತೆಗೆ ಸರಕಾರದ ನೆರವು ತಲುಪಿಸಲು ಅನುಕೂಲವಾಗಲಿದೆ.

ಸಂಘ-ಸಂಸ್ಥೆಗಳ ಕಚೇರಿಗೆ ತೆರಳಿ ಅಧಿಕಾರಿಗಳೇ ಅರ್ಜಿ ಸಲ್ಲಿಕೆಗೆ ನೆರವಾಗಲಿದ್ದಾರೆ. ಅಗತ್ಯ ಪ್ರಮಾಣಪತ್ರ ನೀಡಲು ಇತರೆ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು.

ಆದಷ್ಟು ಬೇಗನೇ ಅರ್ಹ ಕಾರ್ಮಿಕರಿಗೆ ಸರಕಾರದ‌ ನೆರವು ತಲುಪಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ತಾಲ್ಲೂಕು ಮಟ್ಟದಲ್ಲಿ ಇರುವ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿರುವ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ನೆರವು ತಲುಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಕಳೆದ ಬಾರಿ ಯಾವ ಮಾನದಂಡ ಆಧರಿಸಿ ಉದ್ಯೋಗ ಪ್ರಮಾಣ ಪತ್ರ ನೀಡಬೇಕು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಕೆಲವು ಕಡೆ ವಿಳಂಬವಾಗಿದೆ. ಆದರೆ ಈ‌ ಸಲ ಸ್ವಯಂ ಘೋಷಣೆ ಆಧರಿಸಿ ಉದ್ಯೋಗ ಪ್ರಮಾಣ ಪತ್ರ ನೀಡಬೇಕು ಎಂದು ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ತಿಳಿಸಿದರು.

ಲಸಿಕೆ ಹಾಕಿಸಿಕೊಳ್ಳಲು ಮನವಿ:45 ವರ್ಷ ಮೇಲ್ಪಟ್ಟವರಿಗೆ ಜಿಲ್ಲೆಯಲ್ಲಿ ಸಾಕಷ್ಟು ಲಸಿಕೆ ಲಭ್ಯವಿದ್ದು, ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು. ಮೊದಲ ಡೋಸ್ ಪಡೆದವರು ನಿಗದಿತ 82 ದಿನಗಳ ಬಳಿಕ ಪಡೆದುಕೊಳ್ಳಬೇಕು.

ಅದೇ ರೀತಿ ಸರಕಾರ ಗುರುತಿಸಿದ 22 ಆದ್ಯತಾ ವಲಯದಲ್ಲಿ ಕೆಲಸ ಮಾಡುತ್ತಿರುವವರು ಕೂಡ ಲಸಿಕೆಯನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕ್ಷೌರಿಕ ವೃತ್ತಿನಿರತರಿಗೆ ಕೂಡ ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕ್ಷೌರಿಕ ಸಮಾಜದ ಸಂಘಟನೆಯ ಮುಖಂಡರು ಒತ್ತಾಯಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಕಾರ್ಮಿಕ ಸಂಘಟನೆಗಳು ಒಂದು ಸ್ಥಳ ಹಾಗೂ ಸಮಯವನ್ನು ನಿಗದಿಪಡಿಸಿ ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಮುಂದಾದರೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ತಾಂತ್ರಿಕ ಮತ್ತಿತರ ನೆರವು ನೀಡಲಿದ್ದಾರೆ ಎಂದು ತಿಳಿಸಿದರು.

ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ದಾಖಲೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ ಅವರು, ಸೇವಾಸಿಂಧು ಮೂಲಕ ಅಪ್ ಲೋಡ್ ಮಾಡಿದರೆ ಅವರ ಅರ್ಜಿ ನೇರವಾಗಿ ಕಾರ್ಮಿಕ ಇಲಾಖೆಗೆ ಬರಲಿದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರಿಗೆ 3 ಸಾವಿರ 1.55 ಕಾರ್ಮಿಕರಿಗೆ ಮಂಡಳಿಯಿಂದ ನೇರ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಅದೇ ರೀತಿ 11 ವರ್ಗದ ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೆರವು ನೀಡಲಾಗುವುದು ಎಂದು ವೆಂಕಟೇಶ್ ಶಿಂದಿಹಟ್ಟಿ ತಿಳಿಸಿದರು.

1112 ಅರ್ಜಿಗಳು ಬಂದಿದ್ದು, ನಿಯಮಾವಳಿ ಪ್ರಕಾರ ಪರಿಶೀಲಿಸಿ ಸಹಾಯಧನವನ್ನು ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ಸರಕಾರ ಘೋಷಿಸಿರುವ ನೆರವು ಪಡೆಯಲು ನಿಗದಿಪಡಿಸಿರುವ ಪ್ರಕ್ರಿಯೆ ಕ್ಲಿಷ್ಟಕರವಾಗಿದೆ. ಇದನ್ನು ಸರಳೀಕರಿಸಿದಾಗ ಮಾತ್ರ ಅಸಂಘಟಿತ ಕಾರ್ಮಿಕರು ಇದರ ಪ್ರಯೋಜನ ಪಡೆಯುವುದು ಸಾಧ್ಯವಾಗಲಿದೆ ಎಂದು ಅಸಂಘಟಿತ ಕಾರ್ಮಿಕರ ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಬ್ಯಾಂಕ್ ಖಾತೆ ಸಂಖ್ಯೆಯು ಆಧಾರ ಸಂಖ್ಯೆ ಜತೆ ಜೋಡಣೆಯಾಗಿರುವುದರಿಂದ ಸರಕಾರದ ಸಹಾಯಧನ ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಆಗುವುದರಿಂದ ಓಟಿಪಿ ಬದಲಾಗಿ ಸರಳ ಪ್ರಕ್ರಿಯೆ ಜಾರಿಗೊಳಿಸಬೇಕು ಎಂದು ಹೇಳಿದರು.

ಚೇಂಬರ್ ಆಫ್ ಕಾಮರ್ಸ್, ಕಾಸಿಯಾ, ಅಸಂಘಟಿತ ವಲಯದ ವಿವಿಧ ಕಾರ್ಮಿಕ ಸಂಘಟನೆಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್, ಕಾರ್ಮಿಕ ಅಧಿಕಾರಿಗಳಾದ ತರನ್ನುಂ ಬೆಂಗಾಲಿ ಮತ್ತಿತರರು ಸಭೆಯ ಉಪಸ್ಥಿತರಿದ್ದರು.

Read All News