ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಚೈನ್ಲಿಂಕ್ ಗೇಟ್ ಕಟ್ ಆಗಿದ್ದು, ಭಾರೀ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಒಂದೇ ಗೇಟ್ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ಗೇಟ್ ಕಟ್ ಆಗಿದ್ದರಿಂದ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.
ಮಳೆಯಿಂದಾಗಿ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್ಗೆ ಭಾರೀ ಹಾನಿಯಾಗಿದೆ. ಹೀಗಾಗಿ ಜಲಾಶಯ ನೀರಿನ ಒತ್ತಡಕ್ಕೆ ಗೇಟ್ ಕಿತ್ತುಹೋಗಿದೆ. ತನ್ನಿಂದ ತಾನೇ ಡ್ಯಾಂನ ಗೇಟ್ ಓಪನ್ ಆಗಿದೆ.
ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್ ಲಿಂಕ್ ತುಂಡಾಗಿದೆ. ಜಲಾಶಯ ಭರ್ತಿಯಾಗಿರುವುದರಿಂದ ಈ ವೇಳೆ ಗೇಟ್ ದುರಸ್ತಿ ಮಾಡೋದು ಅಸಾಧ್ಯವಾಗಿದೆ.
ಓವರ್ ಲೋಡ್‌ನಿಂದ ತುಂಗಭದ್ರಾ ಡ್ಯಾಂ ಗೇಟ್ ಕಿತ್ತುಹೋಗಿದ್ದರಿಂದ ಕಂಪ್ಲಿ ಪಟ್ಟಣದ ಜನರಿಗೆ ಹೆಚ್ಚಿದ ಆತಂಕ ಮನೆ ಮಾಡಿದೆ. ಹೆಚ್ಚಿನವರು ನದಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಈಗಾಗಲೇ ಕಂಪ್ಲಿ ಪಟ್ಟಣ ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕೂಡ ರವಾನಿಸಲಾಗಿದೆ. ಗೇಟ್ ಒಡೆದ ಬಳಿಕ ಆತಂಕಗೊಂಡ ಕಂಪ್ಲಿಯ ಕೋಟೆ ಪ್ರದೇಶದ ಜನರು ಜಾಗರಣೆ ಮಾಡುವ ಪರಿಸ್ಥಿತಿ ಬಂದೊದಗಿದೆ.
ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ್, ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ,ಸಚಿವ ಶಿವರಾಜ್ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಈಗಾಗಲೇ ಹೈದ್ರಾಬಾದ್, ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಇಂಜನೀಯರ್ ಬರುತ್ತಿದ್ದಾರೆ. ಮಾಹಿತಿ ಪ್ರಕಾರ ಜಲಾಶಯದಲ್ಲಿ 65 ಟಿಎಂಸಿ ನೀರು ಕಡಿಮೆ ಮಾಡಬೇಕು. ಡ್ಯಾಂನ 20 ಅಡಿ ನೀರು ಖಾಲಿಯಾದ ನಂತರ ಗೇಟ್ ರಿಪೇರಿ ಕಾರ್ಯ ಆರಂಭ ಮಾಡಲು ಸಾಧ್ಯ ಅಂತ ಹೇಳಿದ್ದಾರೆ.
60 ಟಿಎಂಸಿ ನೀರು ಖಾಲಿ ಮಾಡಬೇಕು
ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಗೇಟ್ ನ ಚೈನ್ ಲಿಂಕ್ ಕಟ್ ಆಗಿದ್ದು, ಮಧ್ಯರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸ್ಥಳಕ್ಕೆ ಸಚಿವ ಶಿವರಾಜ್ ತಂಗಡಗಿ ಭೇಟಿ
ಪರಿಶೀಲನೆ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು, ಜಲಾಶಯದ 20 ಗೇಟ್ ಗಳಿಂದ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ, ಗೇಟ್ ಕಟ್ ಆಗಿರುವ ಕುರಿತಂತೆ ಜಲ ಸಂಪನ್ಮೂಲ ಸಚಿವರಿಗೆ ಮಾಹಿತಿ ನೀಡಿಲಾಗಿದೆ. ಸಿಎಂಗೂ ಮಾಹಿತಿ ನೀಡುವ ಪಯತ್ನ ನಡೆದಿದೆ. ಸುಮಾರು 60 ಟಿಎಂಸಿ ನೀರು ಜಲಾಶಯದಿಂದ ನದಿ ಮೂಲಕ ಹೊರ ಬಿಡಬೇಕಿದೆ. ಇಷ್ಟು ಪ್ರಮಾಣದ ನೀರು ಹೊರ ಹೋಗಲು ನಾಲ್ಕು ದಿನಕ್ಕೂ ಹೆಚ್ಚು ಸಮಯ ಬೇಕು. ಚೈನ್ ಲಿಂಕ್ ಕಟ್ ಆಗಿರುವ ಗೇಟ್ ಸರಿಪಡಿಸುವ ಬಗ್ಗೆ ವಿಶೇಷ ತಾಂತ್ರಿಕ ತಂಡ ಆಗಮಿಸಲಿದೆ ಎಂದು ಮುನಿರಾಬಾದ್ ನಲ್ಲಿ ಶಾಸಕರು ಹೇಳಿದ್ದಾರೆ.
ಡ್ಯಾಂನಿಂದ ಅಪಾರ ಪ್ರಮಾಣ ನೀರು ಹೊರಕ್ಕೆ
69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಘಟನೆ
ಘಟನೆ ಬಗ್ಗೆ ಮಾಹಿತಿ ನೀಡಿದ ತುಂಗಭದ್ರಾ ನೀರಾವರಿ ವಲಯದ ಸಿಇ ಎಲ್ ಬಸವರಾಜ್, 19ನೇ ಕ್ರಸ್ಟಗೇಟ್ ಡಿಲೀಕ್ ಆಗಿ ಕಟ್ ಆಗಿ ಹೋಗಿದೆ. ಇದೀಗ ಒಂದೇ ಕಡೆ ಪ್ರಜರ್ ಆಗೋದನ್ನು ಕಡಿಮೆ ಮಾಡಲಾಗಿದೆ. ಉಳಿದ ಗೇಟ್ ಗಳನ್ನು ಓಪನ್ ಮಾಡಿ ನೀರು ಬಿಡಲಾಗುತ್ತಿದೆ. ಮುಂಜಾನೆ ಬೆಂಗಳೂರಿನಿಂದ ತಜ್ಞರ ತಂಡ ಡ್ಯಾಂ ಗೆ ಬರಲಿದೆ, ಪ್ರತಿವರ್ಷ ಡ್ಯಾಂ ಗೇಟ್ ಗಳನ್ನು ಮೆಂಟೇನನ್ಸ್ ಮಾಡಲಾಗುತ್ತದೆ. ಡ್ಯಾಂ ಸೇಪ್ಟಿಗೆ ಯಾವುದೇ ತೊಂದರೆ ಇಲ್ಲ. ಇರೋ ನೀರಲ್ಲಿಯೇ ಕೆಲಸ ಮಾಡಲು ಆಗುತ್ತಾ, ಇಲ್ವಾ ಅನ್ನೋದನ್ನು ತಜ್ಞರ ತಂಡ ನಿರ್ಧಾರ ಮಾಡಲಿದೆ. ಸದ್ಯ 70 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ, 69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಘಟನೆ ಆಗಿದೆ ಎಂದು ತಿಳಿಸಿದರು.
ವರದಿ : ರವಿಚಂದ್ರ ಬಡಿಗೇರ