ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ!

  • 14 Jan 2024 , 11:41 PM
  • Mahashtra
  • 166

ಬಾಲಿವುಡ್ ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಇಂದು ನಸುಕಿನ ಜಾವ ಕೊನೆಯುಸಿರೆಳೆದರು ಎಂದು ಅವರ ಸಹೋದರ ಸಂಬಂಧಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

72 ವರ್ಷದ ಸರೋಜ್ ಖಾನ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜೂನ್ 20 ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಮುಂಬೈ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಅವರಿಗೆ ಕೋವಿಡ್-19 ಪರೀಕ್ಷೆ ಕೂಡ ಮಾಡಲಾಗಿತ್ತು ಆ ವರದಿ ನೆಗಟಿವ್ ಬಂದಿದೆ.

ಸರೋಜ್ ಖಾನ್ ರನ್ನು ಬಾಲಿವುಡ್ ಅಂಗಳದಲ್ಲಿ ಮಾಸ್ಟರ್ ಜೀ ಎಂದೇ ಕರೆಯಲಾಗುತ್ತಿತ್ತು. ತಮ್ಮ 3 ನೇ ವಯಸ್ಸಿನಲ್ಲಿ ನಜರಾನಾ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. 1950 ರಲ್ಲಿ ಸಿನಿಮಾಗಳಲ್ಲಿನ ನೃತ್ಯ ತಂಡಗಳಲ್ಲಿ ಸಹ ನರ್ತಕಿಯಾಗಿ ಗುರುತಿಸಿಕೊಂಡ ಅವರು 1974 ರಲ್ಲಿ ಗೀತಾ ಮೇರಾ ನಾಮ್ ಚಿತ್ರದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕಿಯಾಗಿ ಚಿತ್ರರಂಗದಲ್ಲಿ ಹೊಸ ಬದುಕನ್ನು ಕಟ್ಟಿಕೊಂಡರು.

ಮೂರು ಬಾರಿ ರಾಷ್ಟ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಅವರು ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸ್ಮರಣೀಯ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಜನಪ್ರಿಯತೆ ಗಳಿಸಿದ್ದರು. ದೇವದಾಸ್ ಸಿನಿಮಾದ ಡೋಲಾ ರೇ ಡೋಲಾ ಹಾಡಿನ ನೃತ್ಯ, ಮಾಧುರಿ ದೀಕ್ಷಿತ್ ನಟನೆಯ ತೇಜಾಬ್ ಚಿತ್ರದ ಏಕ್ ದೋ ತೀನ್ ಹಾಡಿನ ನೃತ್ಯ, 2007 ರಲ್ಲಿ ಜಬ್ ವಿ ಮೆಟ್ ಚಿತ್ರದ ಯೇ ಇಷ್ ಹಾಯೇ ಹಾಡಿನ ನೃತ್ಯ ಸಂಯೋಜನೆ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

1987 ರ ಮಿಸ್ಟರ್ ಇಂಡಿಯಾ ಚಿತ್ರದ ಹವಾ ಹವಾಯಿ , 1992 ರ ಬೇಟಾ ಚಿತ್ರದ ಧಕ್ ಧಕ್ ಕರನೇ ಲಗಾ ಹಾಡಿನ ನೃತ್ಯಗಳು ಇಂದಿಗೂ ಸ್ಮರಣೀಯವಾಗಿವೆ. 2019 ರಲ್ಲಿ ನಿರ್ಮಿಸಿದ ಕಲಂಕ್ ಚಿತ್ರದ ತಬಾಹ್ ಹೋ ಗಯೇ ಎಂಬ ಹಾಡಿಗೆ ಮಾಧುರಿ ದೀಕ್ಷಿತ್ ಅವರ ನೃತ್ಯಕ್ಕೆ ಕೊನೆಯ ಕೊರಿಯೊಗ್ರಫಿ ಅವರದಾಗಿದೆ.

ಇವರು ಪತಿ ಸೋಹನ್‌ಲಾಲ್, ಪುತ್ರ ರಾಜು ಹಾಗೂ ಪುತ್ರಿಯರಾದ ಹಿನಾ ಹಾಗೂ ಸುಕನ್ಯಾರನ್ನು ಅಗಲಿದ್ದಾರೆ. ಇವರ ನಿಧನದಿಂದ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಇವರ ಅಂತ್ಯಕ್ರಿಯೆ ಮಾಲಾಡ್ ಮಾಲ್ವಾನಿಯಲ್ಲಿ ಇಂದು ಸಂಜೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Read All News