ಬೆಳಗಾವಿ:ರಾಜ್ಯ ರಾಜಕಾರಣದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಡೆಯುತ್ತಿರುವ ನಾಯಕತ್ವದ ಕೂಗಿಗೆ ಜನರು ಕಂಗಾಲಾಗಿ ಹೋಗಿದ್ದಾರೆ.
ರಾಜ್ಯ ಬಿಜೆಪಿ ಪಕ್ಷದಲ್ಲಿ ಸಿಎಂ ಯಡಿಯೂರಪ್ಪನವರಿಗೆ ವಯಸ್ಸಾಗಿದೆ ನಾಯಕತ್ಚ ಬದಲಾವಣೆಗಾಗಿ ತೆರೆ ಮರೆಯಲ್ಲಿ ಬಿಜೆಪಿ ನಾಯಕರು ದೆಹಲಿಗೆ ಹೋಗಿ ಹೈಕಮಾಂಡ್ ಗೆ ಭೇಟಿಯಾಗುವ ಹಂತಕ್ಕೂ ತಲುಪಿದ್ದು ಎಲ್ಲರಿಗೆ ತಿಳಿದ ವಿಷಯ.
ರಾಜ್ಯ ಬಿಜೆಪಿ ಪಕ್ಷದ ನಾಯಕತ್ವ ಬದಲಾವಣೆಗೆ ತೆರೆ ಎಳೆಯಲು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಕಾಲ ಬಿಜೆಪಿ ಶಾಸಕ, ಸಚಿವರ ಅಭಿಪ್ರಾಯ ಸಂಗ್ರಹಿಸಿ ದೆಹಲಿಯ ಹೈಕಮಾಂಡ್ ಮುಂದೆ ಯಡಿಯೂರಪ್ಪನವರೆ ರಾಜ್ಯ ಬಿಜೆಪಿಗೆ ಮಾಸ್ ಲೀಡರ್, ಮೂವರು ಶಾಸಕರನ್ನು ಹೊರತು ಪಡಿಸಿದರೆ ಯಾರೂ ಅಪಸ್ವರ ಎತ್ತುತ್ತಿಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.
ಬಿಜೆಪಿ ಪಾಳೆಯದ ನಾಯಕತ್ವದ ಬದಲಾವಣೆಯ ಕೂಗು ತಣ್ಣಗಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂಗಾಗಿ ಕಾದಾಟ ಜೋರಾಗಿ ನಡೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟಾಂಗ್ ನೀಡಿದರೂ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಕಾಂಗ್ರೆಸ್ ನ ಕೆಲ ಶಾಸಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆ ಡಿ.ಕೆ.ಶಿವಕುಮಾರ ಮುಂದಿನ ಸಿಎಂ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ರಾಜ್ಯ ವಿಧಾನಸಭೆಯ ಚುನಾವಣೆ ಇನ್ನೂ 2023ಕ್ಕೆ ಇರುವ ಮುಂಚೆಯೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಅಭ್ಯರ್ಥಿಯ ಬಗ್ಗೆ ಘೋಷಣೆ ಮಾಡುತ್ತಿರುವ ಕಾಂಗ್ರೆಸ್ ಶಾಸಕರ ನಡೆಗೆ ಸ್ವಪಕ್ಷದವರೇ ಮುನಿಸುಕೊಂಡಿದ್ದಾರೆ.
ಸದ್ಯ ಕಾಂಗ್ರೆಸ್ ನಲ್ಲಿ ಮನೆಯೊಂದು ಐದು ಬಾಗಿಲುಗಳಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಬಣದ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದ್ದು ಗುಟ್ಟಾಗಿ ಉಳಿದಿಲ್ಲ.
ಕೋವಿಡ್ ನಿರ್ವಣೆಯಲ್ಲಿ ಸರಕಾರದ ವೈಫಲ್ಯ, ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಜನಪರ ಹೋರಾಟ ಮಾಡಿ ರಾಜ್ಯದ ಜನರ ಗಮನ ಸೆಳೆಯುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಸಿಎಂ ಅಭ್ಯರ್ಥಿಯ ಬಗ್ಗೆ ತಲೆ ಕೆಡಿಸಿಕೊಂಡಿದೆ ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.