ಹುಕ್ಕೇರಿ: ಉದ್ಯೋಗ ಖಾತರಿ ಯೋಜನೆಯ ಕೂಲಿಕಾರ್ಮಿಕರು ಹಾಗೂ ಸಾಮಗ್ರಿ ಅನುದಾನದ ಅನುಪಾತದಲ್ಲಿ ಯಾವುದೇ ರೀತಿಯ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಸತೀಶ ಜಾರಕಿಹೊಳಿ ತಾಕೀತು ಮಾಡಿದರು.
ಇಲ್ಲಿನ ತಾಲೂಕು ಪಂಚಾಯತ ಸಭಾಭವನದಲ್ಲಿ ಶನಿವಾರ ನಡೆದ ಉದ್ಯೋಗ ಖಾತರಿ ಯೋಜನೆಯ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಯಮಕನಮರಡಿ ವಿಧಾನಸಭೆ ಕ್ಷೇತ್ರದ ಸುಮಾರು 20 ಗ್ರಾಪಂಗಳ ಪೈಕಿ ಬಹುತೇಕ ಕಡೆಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರ ಮತ್ತು ಸಾಮಗ್ರಿ ಅನುದಾನ ಅನುಷ್ಠಾನಗೊಳಿಸುವಲ್ಲಿ ಅನುಪಾತವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಕಷ್ಟು ಮಾನವ ದಿನಗಳು ಸೃಜನೆಯಾಗುತ್ತಿವೆ. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಸಾಮಗ್ರಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರಿಂದ ಸಾಮಗ್ರಿ ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಿನ್ನಡೆಯಾಗುತ್ತಿದೆ. ಹಾಗಾಗಿ ಬರುವ ದಿನಗಳಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗಗಳನ್ನು ಅನುಸರಿಸಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸೂಚಿಸಿದರು.
ತೋಟಪಟ್ಟಿಗಳ ರಸ್ತೆ ನಿರ್ಮಾಣ, ಶಾಲೆ, ಅಂಗನವಾಡಿ ಮತ್ತು ಸ್ಮಶಾನಗಳ ಸುಧಾರಣೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು. ಶಾಲೆಗಳ ಒತ್ತುವರಿ ಜಾಗೆಯನ್ನು ತೆರವುಗೊಳಿಸಬೇಕು. ಉದ್ಯೋಗ ಖಾತರಿ ಯೋಜನೆಯು ಆಸ್ತಿಗಳನ್ನು ಸೃಜನೆ ಮಾಡುವ ಮೂಲ ಉದ್ದೇಶ ಹೊಂದಿದೆ. ಆದರೆ, ಕೆಲವು ಕಡೆಗಳಲ್ಲಿ ಕೇವಲ ಬಿಲ್ ಬರೆದು ಹಣ ಲಪಟಾಯಿಸುವುದಕ್ಕೆ ಸೀಮಿತವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ವಿಕಲಚೇತನರಿಗೆ ವಿಲ್‍ಚೇರ್ ವಿತರಣೆ:
ಇದಕ್ಕೂ ಮೊದಲು ಶಾಸಕ ಸತೀಶ ಜಾರಕಿಹೊಳಿ ಅವರು ತಾಪಂ ಕಾರ್ಯಾಲಯದ ಮುಂಭಾಗ ವಿಕಲಚೇತನರಿಗೆ ವಿಲ್‍ಚೇರ್ ಗಳನ್ನು ವಿತರಿಸಿದರು. ಬಳಿಕ ತಾಪಂ ಸಭಾಭವನದಲ್ಲಿ ಮಹಿಳಾ ಫಲಾನುಭವಿಗೆ ರೇಷ್ಮೆ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ಮಂಜೂರಾದ 2 ಲಕ್ಷ ರೂ,ಗಳ ಚೆಕ್‍ನ್ನು ವಿತರಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ತಹಶೀಲ್ದಾರ ಡಾ.ಡಿ.ಎಚ್. ಹೂಗಾರ, ತಾಪಂ ಮ್ಯಾನೇಜರ್ ಆರ್.ಎ. ಚಟ್ನಿ, ಮುಖಂಡರಾದ ಕಿರಣ ರಜಪೂತ, ಮಂಜುನಾಥ ಪಾಟೀಲ, ಫಕೀರವ್ವಾ ಹಂಚಿನಮನಿ, ದಸ್ತಗೀರ ಬಸಾಪುರೆ, ಪಪ್ಪುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು. ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ ಸ್ವಾಗತಿಸಿ, ವಂದಿಸಿದರು.