ಯಾರ ಕೊರಳಿಗೆ ಬೆಳಗಾವಿ ಮಹಾನಗರ ಪಾಲಿಕೆ ?

  • 15 Jan 2024 , 1:35 AM
  • Belagavi
  • 117

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯ ಕಣದ‌ ಕಾವು ಈ ರಂಗೇರ ತೊಡಗಿದೆ. ಕಾಂಗ್ರೆಸ, ಬಿಜೆಪಿ ಎಂಇಎಸ್ ನಡುವೆ ಪೈಪೋಟಿ ಏರ್ಪಟ್ಟಿದ್ದು ಯಾರ ಕೊರಳಿಗೆ ವಿಜಯದ ಮಾಲೆ ಎಂಬುದು ಸೆ.6ಕ್ಕೆ ಸ್ಪಷ್ಟವಾಗಿ ತಿಳಿಯುತ್ತದೆ.

ಬಿಜೆಪಿಗೆ ಬಿಸಿ ತುಪ್ಪವಾಗಿದ್ದ ಬಂಡಾಯದ ಬಿಸಿಗೆ ಸೋಮವಾರ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ‌ನಳೀನಕುಮಾರ ಕಟೀಲ ಬಿಜೆಪಿ ಬಂಡಾಯದ ಅಭ್ಯರ್ಥಿಗಳನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡುವುದಾಗಿ ಖಡಕ ಸಂದೇಶ ರವಾನಿಸಿದ್ದಾರೆ. ಬಿಜೆಪಿಯಲ್ಲಿದ್ದರೂ ಪಕ್ಷದ ಹೆಸರನ್ನು ಬಳಸಿಕೊಳ್ಳದೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವವರು ಮುಂದೆ ಪಾಲಿಕೆಯ ಅಧಿಕಾರ ಹಿಡಿಯಲು ಕಸರತ್ತು ನಡೆಸುವಾಗ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದೆ ಇದ್ದ ಅಭ್ಯರ್ಥಿಗಳ ಆಯ್ಕೆಯಾದರೆ ಮುಂದಿನ ನಡೆಯೂ ಗೌಪ್ಯವಾಗಿದೆ.

ಕಾಂಗ್ರೆಸ್ ನಲ್ಲಿಯೂ ಬಂಡಾಯದ ಬಿಸಿ ಇದ್ದು, ಈಗಾಗಲೇ 45 ವಾರ್ಡುಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕೆ‌ ಇಳಿಸಿದೆ. ಉಳಿದ ಕಡೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡವರು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ಮಾಜಿ ಸಚಿವ ಎಂ.ಬಿ.ಪಾಟೀಲ ಚುನಾವಣೆ ಎದುರಿಸುವ ರಣತಂತ್ರ ‌ಹೆಣೆದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹಿಂಬಾಗಿಲಿನಿಂದ ರಾಜಕೀಯ ಮಾಡುವ ಪುಂಡ ಎಂಇಎಸ್ ಇಲ್ಲಿಯವರೆಗೂ ತಮ್ಮ ಅಭ್ಯರ್ಥಿಗಳ ಸಂಖ್ಯೆ ಸ್ಪಷ್ಟ ಪಡಿಸಿಲ್ಲ. ಸುಮಾರು 238 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದು ಇದರಲ್ಲಿ ಯಾರು ಗೆಲವು ಸಾಧಿಸುತ್ತಾರೊ ಅವರಿಗೆ ಮಾಲೆ ಹಾಕಿ ನಮ್ಮ‌ ಅಭ್ಯರ್ಥಿ ಎನ್ನುವ ಸಂಪ್ರದಾಯ ಎಂಇಎಸ್ ನದ್ದಾಗಿದೆ. ತ್ರಿಕೋನ ಸ್ಪರ್ಧೆಯ ನಡುವೆ ಆಪ್, ಜೆಡಿಎಸ್ ಚುನಾವಣೆಯ ಕಸರತ್ತು ನಡೆಸಿದ್ದಾವೆ. ಪಾಲಿಕೆ ಚುನಾವಣೆಯಲ್ಲಿ ಯಾರ ಕೊರಳಿಗೆ ಪಾಲಿಕೆ ಸಿಗುತ್ತದೆ ಎಂದು ಬೆಳಗಾವಿ ಮತದಾರರು ಕಾದು ನೋಡುತ್ತಿದ್ದಾರೆ.

Read All News