ತ್ಯಾಗ, ಸರಳತೆ ಮತ್ತು ಸ್ವಹಿತ ರಹಿತ ಚಿಂತನೆ ನಾಯಕತ್ವದ ಪ್ರಮುಖ ಗುಣ ಲಕ್ಷಣಗಳು : ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

  • 15 Jan 2024 , 1:51 AM
  • Belagavi
  • 128

ಘಟಪ್ರಭ : ತ್ಯಾಗ, ಸರಳತೆ ಮತ್ತು ಸ್ವಹಿತ ರಹಿತ ಚಿಂತನೆ ನಾಯಕತ್ವದ ಪ್ರಮುಖ ಗುಣ ಲಕ್ಷಣಗಳು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಘಟಪ್ರಭಾ ಸೇವಾದಳ ತರಬೇತಿ ಶಿಬಿರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಎನ್ಎಸ್ ಯುಐ ಪದಾಧಿಕಾರಿಗಳ ತರಬೇತಿ ಶಿಬಿರ "ಚಿಂತನ - ಮಂಥನ"ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಅವರು ಮಾತನಾಡಿದರು.

ನಾಯಕತ್ವದ ಗುಣಗಳ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ ಅವರು ಮಾತನಾಡಿದರು. ಉತ್ತಮ ನಾಯಕನಾಗುವ ಆಸೆ ಎಲ್ಲರಲ್ಲೂ ರುತ್ತದೆ. ಆದರೆ ಯಶಸ್ವಿ ನಾಯಕನಾಗಲು ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕಾಗುತ್ತದೆ. ನಾಯಕತ್ವದ ಮುಖ್ಯ ಲಕ್ಷಣ ತ್ಯಾಗ ಮತ್ತು ಸರಳತೆ, ಸ್ವಹಿತದ ಬಗ್ಗೆ ಯೋಚಿಸದೆ ಎಲ್ಲರ ಹಿತ ಕಾಪಾಡುವ ಸಮಷ್ಟಿಯ ಚಿಂತನೆ ಎಂದು ಅವರು ವಿವರಿಸಿದರು.

ನಮ್ಮ ಸುತ್ತಲಿರುವ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಗೌರವಿಸುವುದೇ ನಿಜವಾದ ನಾಯಕತ್ವದ ಗುಣಗಳಾಗಿವೆ. ರಾಜಕಾರಣದಲ್ಲಿ ನಾವು ಗುರಿಗಳನ್ನು ಇಟ್ಟುಕೊಂಡು ಮುನ್ನಡೆಯಬೇಕಾಗಿದೆ. ರಾಜಕಾರಣವು ಟೈಮ್ ಪಾಸ್ ಜಾಬ್ ಅಲ್ಲ, ಇದು ಪುಲ್ ಟೈಮ್ ಜಾಬ್ ಆಗಿದ್ದು, ರಾಜಕಾರಣಕ್ಕೆ ಅದರದೇ ಆದ ಮಹತ್ವವಿದೆ ಎಂದು ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್‌ನ ಉಸ್ತುವಾರಿಗಳಾದ ಆರ್. ದೃವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್ ಶಂಕರ್, ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಎನ್‌ಎಸ್‌‌ಯು‌ಐ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read All News