ಮೋದಿಯವರಿಂದ ಜನರಿಗೆ ನರಕ ದರ್ಶನ: ಸಲೀಂ ಅಹಮ್ಮದ್ ಟೀಕಾ ಪ್ರಹಾರ

  • 15 Jan 2024 , 1:28 AM
  • Belagavi
  • 114

ಬೆಳಗಾವಿ:" ಕೊರೋನಾದಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ಪರಿಹಾರ ನಿಧಿಯಿಂದ 20 ಸಾವಿರ ಲಕ್ಷ ರೂ. ನೀಡಲಾಗಿದೆ ಎಂದು ಮೋದಿಯವರು ಹೇಳಿದ್ದಾರೆ. ಆದರೆ, ಇಲ್ಲಿಯವರೆಗೂ ' ನಯಾ ಪೈಸೆ ಲೆಕ್ಕ' ಇಲ್ಲ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ, ಮೋದಿಯವರಿಂದ ಜನರಿಗೆ ನರಕ ದರ್ಶನವಾಗಿದೆ " ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಟೀಕಾ ಪ್ರಹಾರ ನಡೆಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ. ಅದಕ್ಕಾಗಿ, ಅವರಿಗೆ ಆಸ್ಕರ್‌ ಅವಾರ್ಡ್ಸ್ ಸಲ್ಲಬೇಕು. ಏಳು ವರ್ಷದಲ್ಲಿ ಜನರಿಗೆ ನರಕ ತೋರಿಸಿದ್ದಾರೆ. ಈ ನಿರ್ಜೀವ ಸರ್ಕಾರವನ್ನು ಜನ ಕಿತ್ತೆಸೆಯಲು ಭಯಸಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಬಲ ಪಡಿಸಲು ಕಾಂಗ್ರೆಸ್ ಕಮಿಟಿ ಸಭೆ:- ಅಕ್ಟೋಬರ್ 2 ರಿಂದ 30 ವೆರೆಗೂ ಗಾಂಧಿಜೀಯವರ ಗ್ರಾಮ ಸ್ವರಾಜ್ಯ ಸಭೆ ನಡೆಸಲಾಗುವುದು. ನವೆಂಬರ್ 30 ರ ಒಳಗಾಗಿ ಎಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಮಿಟಿ ನಡೆಸಿ, ಪಕ್ಷ ಬಲ ಪಡಿಸುವ ಕಾರ್ಯ ಹಾಗೂ ಗ್ರಾಮೀಣ ಜನತೆಗೆ ಕಾಂಗ್ರೆಸ್ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಸುವ ಆಯೋಜನೆ ಮಾಡಲಾಗಿದೆ. ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು. ಅದಕ್ಕಾಗಿ ಬೂತ ಮಟ್ಟದಲ್ಲಿ ಚರ್ಚೆ, ಎರಡು ದಿನಗಳ ತರಬೇತಿ ಕ್ಯಾಂಪ್ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂಬರುವ ಜಿಪಂ, ಚುನಾವಣೆ ಎದುರಿಸಲು ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠಗೊಳಿಸಬೇಕಾಗಿದೆ. ಈ ಉದ್ದೇಶದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಾಗುವುದು ಎಂದರು.

ಬಿಜೆಪಿ ಸರ್ಕಾರ ವಿಫಲ: ಕೊರೋನಾದಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದರು‌. ಇಲ್ಲಿವರೆಗೂ ಮೃತಪಟ್ಟವರ ಲೇಕ್ಕ ಇಲ್ಲ, ಪರಿಹಾರವೂ ಇಲ್ಲ, ಈ ಭ್ರಷ್ಟ ಸರ್ಕಾರ ಸುಳ್ಳಿನ ಕಂತೆ ಕಟ್ಟುತ್ತಿದೆ. ಕೊರೋನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಸಾವಿರಾರು ಜನ ಮೃತಪಟ್ಟಿದ್ದಾರೆ.‌ ಮೃತ ಪಟ್ಟವರಿಗೆ ತಲಾ 5 ಲಕ್ಷ ಪರಿಹಾರ ನೀಡಿ ಎಂದರು.

ಬೊಮ್ಮಾಯಿ ಚಕ್ರವ್ಯೂಹದಲ್ಲಿ ಸಿಲುಕ್ಕಿದ್ದಾರೆ: ತೈಲ ಬೆಲೆ ಗಗನಕ್ಕೇರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆರಿಗೆ ಕಡಿತಗೊಳ್ಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು. ಸರ್ಕಾರ ಪ್ರತಿಹಂತದಲ್ಲೂ ಲೂಟಿ ಮಾಡುತ್ತಿದೆ. ಪಾಪ್ ಸಿಎಂ ಬಸವರಾಜ ಬೊಮ್ಮಾಯಿ ಚಕ್ರವ್ಯೂಹ ದಲ್ಲಿ ಸಿಲುಕ್ಕಿದ್ದಾರೆ. ಅವರಿಗೆ ಅಧಿಕಾರ ಇದೆ ಹೊರತು, ಆಡಳಿತ ಮಾಡಲು ಹೈಕಮಾಂಡ್ ಬಿಡುತ್ತಿಲ್ಲ. ಬಿಜೆಪಿ ಪರಿಸ್ಥಿತಿ ಮನೆ ಒಂದು ಮೂರು ಬಾಗಿಲಾಗಿದೆ‌. ಇದಕ್ಕೆ ಸಾಕ್ಷಿ ಯಡಿಯೂರಪ್ಪನವರನ್ನು ಕೆಳಗಿಳಿಸಿರುವುದು ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಪಕ್ಕಾ:- ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಆಡಳಿತಕ್ಕೆ ಜನ ಬೇಸತ್ತು ಹೋಗಿದೆ. ಬಿಜೆಪಿಯಲ್ಲಿನ ಭ್ರಷ್ಟಾಚಾರದ ವಿಚಾರ ಹಾಗೂ ಬೆಲೆಗಳ ಏರಿಕೆ ಜನರ ಮುಂದಿಟ್ಟು ಮತ ಕೇಳುತ್ತಿವೆ. ಜನತೆ ಬದಲಾವಣೆ ಬಯಸಿದೆ. ಜನರಿಗೆ ನೆಮ್ಮದಿ ಬೇಕಿದೆ, ಅದನ್ನೂ ಬಿಜೆಪಿ ಕಿತ್ತುಕೊಂಡಿದೆ. ಏಳು ವರ್ಷಗಳ ಅವಧಿಯಲ್ಲಿ ಬಡ-ಮದ್ಯಮ ವರ್ಗದವರನ್ನು ಬೀದಿಗೆ ತಂದಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಪಕ್ಕಾ, ಯಾವುದೇ ಸಮಯದಲ್ಲಿ ಚುನಾವಣೆ ನಡೆಯಬಹುದು ಎಂದು ಭವಿಷ್ಯದ ನುಡಿದರು‌.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪೀರೂಜ ಸೇಠ, ರಾಜು ಸೇಠ, ವಿನಯ ನಾವಲಗಟ್ಟಿ, ಸುನೀಲ್ ಹಣಮನ್ನವರ, ಹಬೀಬ ಶೀಲದಾರ,ರಾಜೇಂದ್ರ ಪಾಟೀಲ, ಇಮ್ರಾನ ತಪಕೀರ, ಮೋಹನ ರೆಡ್ಡಿ ಹಾಗೂ ಇತರರು ಇದ್ದರು.

Read All News