ಬೆಳಗಾವಿ :ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಳುಹಿಸಿದ ಕಬ್ಬಿನ ಬಿಲ್ ನ್ನು ಮಾಲೀಕರು ರೈತರಿಗೆ ಪಾವತಿಸುವ ಕ್ರಮ ಜರುಗಿಸಬೇಕೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ವಿಜಯ ಪಾಟೀಲ ಒತ್ತಾಯಿಸಿದರು. ಮಂಗಳವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ನೀಡಿದ 14 ದಿನದೊಳಗಾಗಿ ಸಂಪೂರ್ಣ ಹಣ ಪಾವತಿಸುವಂತೆ ಸರಕಾರಕ್ಕೆ ಸೂಚನೆ ನೀಡಿದರೂ ಇಲ್ಲಿಯವರೆಗೆ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ಕಬ್ಬು ಬೆಂಬಲ ಬೆಲೆಯ ಪ್ರಸಕ್ತ ವರ್ಷದ 3,500 ರೂ. ಕಟಾವು ಹಾಗೂ ಸಾಗಾಣಿಕೆ ವೆಚ್ಚ ಹೊರಡಿಸಿ ನಿಗದಿ ಪಡಿಸುವಂತೆ ಒತ್ತಾಯಿಸಿದರು.
ರಾಜ್ಯ ಸರಕಾರ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಹಣ ನೀಡಲು ಒಂದು ಕಮಿಟಿ ರಚಿಸಬೇಕು. ಅದರಂತೆ ಎಲ್ಲ ಕಾರ್ಖಾನೆ ನಡೆಸುವವರಿಗೆ ಏಕಕಾಲಕ್ಕೆ ಒಂದೇ ಸಮಯದಲ್ಲಿ ಕಬ್ಬು ನುರಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಎಸ್.ವಾಯ್.ಕಲಾರಕೊಪ್ಪ, ಶಂಕರ ಹೆಗಡೆ, ಅಬ್ದುಲ್ ಶೇಖ, ಭೈರು ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.