ಶೇ.100 ರಷ್ಟು ಆಸನಗಳ ಭರ್ತಿ ಸಾಧ್ಯವಿಲ್ಲ ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶ
- 15 Jan 2024 , 12:27 AM
- Dharwad
- 104
ಹುಬ್ಬಳ್ಳಿ: ಕೋವಿಡ್ ಲಾಕ್‍ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳು ಸಾವಿರಾರು ಕೋಟಿ ರೂ.ನಷ್ಟ ಅನುಭವಿಸಿವೆ ಸಾರಿಗೆ ನಿಗಮಗಳ ನೌಕರರ ಎಪ್ರೀಲ್ ತಿಂಗಳ ವೇತನಕ್ಕಾಗಿ ಸರ್ಕಾರ 326 ಕೋಟಿ ರೂ.ನೀಡಿದೆ. ಮೇ ತಿಂಗಳ ವೇತನಕ್ಕಾಗಿ ಅರ್ಧದಷ್ಟು ಅನುದಾನ ನೀಡಿದೆ ಆರ್ಥಿಕ ಪರಿಸ್ಥಿತಿ ಸಂಕಷ್ಟ ದಲ್ಲಿದೆಯಾದರೂ, ಸದ್ಯ ಟಿಕೆಟ್ ದರದ ಹೆಚ್ಚಳ ಕುರಿತು ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಉಪಮುಖ್ಯಮಂತ್ರಿ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು
ವಾಕರಸಾಸಂ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು
ಲಾಕ್‍ಡೌನ್ ಜಾರಿಯಿಂದಾಗಿ ಸ್ಥಗಿತವಾಗಿದ್ದ ಸಾರ್ವಜನಿಕ ಸಾರಿಗೆ ಸೇವೆ ಮೇ.6 ರಿಂದ ಪುನರಾರಂಭವಾಗಿದೆ. ಸಾರ್ವಜನಿಕ ಸಾರಿಗೆ ಅವಲಂಭಿಸಿರುವ ಜನರ ತೊಂದರೆ ನೀಗಿಸಲು ಬಸ್ ಸಂಚಾರ ಪುನರಾರಂಭದ ಕ್ರಮ ಕೈಗೊಳ್ಳಲಾಗಿದೆರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಸದ್ಯ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಸಾರಿಗೆ ಬಸ್ ಸೇವೆ ನೀಡಲಾಗುತ್ತಿದೆ. ದೂರದ ಊರುಗಳ ಪ್ರಯಾಣ ಅವಧಿಯಲ್ಲಿ ಸ್ವಲ್ಪ ಹೆಚ್ಚಳವಾದರೂ ಸೇವೆ ನೀಡಲಾಗುವುದು. ಪ್ರಯಾಣಿಕರ ಲಭ್ಯತೆ ಆಧರಿಸಿ ಶೀಘ್ರದಲ್ಲಿಯೇ ಬಸ್ಸುಗಳ ರಾತ್ರಿ ಸಂಚಾರವನ್ನೂ ಕೂಡ ಪುನರಾರಂಭಿಸಲಾಗುವುದು .
ಸಾಮಾಜಿಕ ಅಂತರ ನಿಯಮದ ಪಾಲನೆ ಕಡ್ಡಾಯವಾಗಿರುವುದರಿಂದ ಶೇ.100 ರಷ್ಟು ಆಸನಗಳ ಭರ್ತಿ ಸಾಧ್ಯವಿಲ್ಲ. ಒಂದು ಬಸ್ಸಿನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ಜೂನ್ 1 ರ ನಂತರ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳು ಏನಿರುತ್ತವೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ವಹಿಸಲಾಗುವುದು. ರಾಜ್ಯದ 4 ನಿಗಮಗಳಲ್ಲಿ ಒಟ್ಟು ಸುಮಾರು 1,30,000 ಸಿಬ್ಬಂದಿ ವರ್ಗದವರಿದ್ದಾರೆ. ಎಪ್ರಿಲ್ ತಿಂಗಳ ವೇತನಕ್ಕೆ ಸರ್ಕಾರ ಅನುದಾನ ನೀಡಿದೆ. ಮೇ ತಿಂಗಳ ವೇತನಕ್ಕೆ ಅರ್ಧದಷ್ಟು ಅನುದಾನ ನೀಡಲಾಗಿದೆ.2014 ರಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 54 ರೂ.ಇತ್ತು. ಈಗ ಹೆಚ್ಚಾಗಿದೆ. ಸಂಬಳದಲ್ಲಿಯೂ ಈಗ ಶೇ.30 ರಷ್ಟು ಹೆಚ್ಚಾಗಿದೆ. ವಾಹನದ ಬಿಡಿ ಭಾಗಗಳು, ಟಯರ್ ಸೇರಿದಂತೆ ಇತರೆ ವೆಚ್ಚದ ಹೆಚ್ಚಳಕ್ಕೆ ಸಮಾನಾಂತರವಾಗಿ ಟಿಕೆಟ್ ದರದಲ್ಲಿ ಹೆಚ್ಚಳವಾಗದಿರುವುದು ಹಾನಿಗೆ ಕಾರಣವಾಗಿದೆ. ಬಜೆಟ್ ಅಧಿವೇಶನದ ಪೂರ್ವದಲ್ಲಿ ಶೇ.12 ರಷ್ಟು ಟಿಕೆಟ್ ದರ ಹೆಚ್ಚಿಸಿದಾಗ, ವಿರೋಧ ಪಕ್ಷಗಳೂ ಕೂಡ ಸಹಮತ ವ್ಯಕ್ತಪಡಿಸಿವೆ . ಓವರ್ ಟೈಮ್ ಕರ್ತವ್ಯ ಕಡಿಮೆ ಮಾಡಿ, ಎಲ್ಲರನ್ನೂ ಡ್ಯೂಟಿಗೆ ಬಳಸಿಕೊಳ್ಳಲಾಗುವುದು. ಅನಗತ್ಯವಾಗಿ ಹೆಚ್ಚು ಟ್ರಿಪ್‍ಗಳಲ್ಲಿ ವಾಹನ ಓಡಿಸುವುದನ್ನು ಸ್ಥಗಿತ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ,ಅರವಿಂದ ಬೆಲ್ಲದ, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್,ವಾಕರಸಾಸಂ ಅಧ್ಯಕ್ಷ ವಿ.ಎಸ್. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.