ಹುಬ್ಬಳ್ಳಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಮೂಲಕ ಕೇಂದ್ರ ಸರ್ಕಾರ ಜನತೆಗೆ ದೀಪಾವಳಿ ಉಡುಗೊರೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರರೊಂದಿಗೆ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ ನಿನ್ನೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ ಕೂಡಲೇ ಕೇಂದ್ರ ಹಣಕಾಸು ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂ.ಗಳನ್ನು ಕಡಿಮೆ ಮಾಡಿದೆ. ಇಂದು ಸಂಜೆಯಿಂದಲೇ ಇದು ಜಾರಿಯಾಗಲಿದೆ ಎಂದರು.
ಒಂದು ಅಂದಾಜಿನ ಪ್ರಕಾರ ಇದರಿಂದ 2100 ಕೋಟಿ ರೂ.ಗಳು ರಾಜ್ಯ ಬೊಕ್ಕಸಕ್ಕೆ ಕೊರತೆಯಾಗಲಿದೆ. ಪೆಟ್ರೋಲ್ ಹಾಗೂ ಡೀಸಲ್ ಬೆಲೆ 100 ರೂ.ಗಳು ದಾಟಿದಾಗಿನಿಂದಲೂ ಇಳಿಕೆ ಮಾಡಬೇಕೆಂಬ ಚಿಂತನೆ ಇತ್ತು ಸರ್ಕಾರಕ್ಕೆ ಇತ್ತು ಎಂದರು.
ಜನಸೇವಕ ಜನಸೇವಕ ಯೋಜನೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜನವರಿ 26 ರಿಂದ ಜನಸೇವಕ ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ದೊಡ್ಡ ಸಂಖ್ಯೆಯಲ್ಲಿ ಜನಸೇವಕರಿಗೆ ತಾಂತ್ರಿಕ ತರಬೇತಿ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ತರಬೇತಿ ನೀಡಿ ಜನಸೇವಕರಾಗಿ ಪರಿವರ್ತಿಸಿ ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಮನೆಗೆ ಹೋಗಿ ಲಾಪ್ ಟಾಪ್ ಮೂಲಕವೇ ನೋಂದಣಿ, ಸ್ವೀಕೃತಿ , ಅರ್ಜಿ ಪಡೆದು ಸೌಲಭ್ಯಗಳನ್ನು ವಿತರಿಸಬೇಕಿರುವುದರಿಂದ ತರಬೇತಿ ಅತ್ಯಗತ್ಯ ಎಂದರು.
ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸಿಎಂ.ಡ್ಯಾಶ್ ಬೋರ್ಡ್ ಸಿದ್ಧವಾಗಿದೆ . ಅಧಿಕಾರಿಗಳು ಪ್ರತಿ ನಿತ್ಯ. ಸುಧಾರಣೆಯನ್ನು ಮೇಲಿನಿಂದ ತಳಮಟ್ಟದವರೆಗೆ ತೆಗೆದುಕೊಂಡು ಹೋಗುವ ಪ್ರಯತ್ನವಿದು. ಎಲ್ಲಾ ಇಲಾಖೆಗಳ ಪ್ರಮುಖ ಯೋಜನೆಗಳ ಬಗ್ಗೆ 15 ದಿನಕ್ಕೊಂದು ಬಾರಿ ಕೋರ್ಸ್ ಕರೆಕ್ಷನ್ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಸಿಎಂ ಡ್ಯಾಶ್ ಬೋರ್ಡ್ ನ್ನು ಸೃಜಿಸಲಾಗಿದೆ ಎಂದರು.
100 ದಿನಗಳ ಆಡಳಿತ: 100 ದಿನಗಳಲ್ಲಿ ಭದ್ರ, ಭರವಸೆಯ ಮತ್ತು ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದೇವೆ. ಅಮೃತ ಯೋಜನೆಗಳು, ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಬಡವರಿಗೆ ಸಂಧ್ಯಾಸುರಕ್ಷಾ, ವಿಧಾವಾವೇತನ, ಅಂಗವಿಕಲರ ವೇತನಗಳನ್ನು ಹೆಚ್ಚು ಮಾಡಲಾಗಿದೆ. ಇದಲ್ಲದೆ, ಇನ್ನೂ ಹಲವಾರು ಯೋಜನೆಗಳನ್ನು ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಆರ್ಥಿಕ ಚೇತರಿಕೆಯನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.
ವ್ಯವಸ್ಥೆಯ ಸುಧಾರಣೆ, ಜನರ ಬಳಿಗೆ ಸರ್ಕಾರ ಹೋಗಬೇಕು ಹಾಗೂ ಆರ್ಥಿಕತೆ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲ ಉಪಯೋಗ ಮಾಡಿಕೊಳ್ಳಬೇಕು ಎಂಬ ಉದ್ದೇಶ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ತಲಾ ಆದಾಯವನ್ನು ಇತರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಮೊದಲನೇ 5 ನೇ ಸ್ಥಾನದಲ್ಲಿದ್ದರೂ, ಇದರಲ್ಲಿ ಎಲ್ಲ ಜನರ ಕೊಡುಗೆ ಇರಬೇಕು. ಎಸ್.ಸಿ.ಎಸ್.ಟಿ , ಹಿಂದುಳಿದ ವರ್ಗಗಳು ಮತ್ತು ಬದವರೂ ಸಹ ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಆರ್ಥಿಕ ನೆರವು ನೀಡಬೇಕು ಹಾಗೂ ಹೆಣ್ಣುಮಕ್ಕಳನ್ನು ಕಾರ್ಯಕ್ರಮಗಳ ಭಾಗವಾಗಿಸುವುದು ನಮ್ಮ ಆಶಯ ಎಂದರು.
ನೂರು ದಿನಗಳಲ್ಲಿ ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಅಗತ್ಯವಿರುವ ನಿರ್ಣಯಗಳು ಹಾಗೂ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ವಿಚಾರಗಳು ತೃಪ್ತಿ ತಂದಿದೆ ಎಂದರು.
ದೆಹಲಿ ಪ್ರವಾಸ ರದ್ದುರಾಷ್ಟ್ರೀಯ ಕಾರ್ಯಕಾರಿ ಸಭೆಗೆ 7 ರಂದು ದೆಹಲಿಗೆ ತೆರಳುತ್ತಿಲ್ಲ. ಬೆಂಗಳೂರಿನ ಪಕ್ಷದ ಕಚೇರಿಯಿಂದಲೇ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.