ಹಾವೇರಿ: ಜಿಲ್ಲೆಯ ರಾಣೇಬೆನ್ನೂರನಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ನಷ್ಟವಾದ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ, ಅತಿಥಿ ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಶಾಶ್ವತ ಅನುದಾನ ರಹಿತ ಆಡಳಿತ ಮಂಡಳಿಗಳ ಸಂಘದ ಸದಸ್ಯರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಸಂಚಾಲಕ ಗುರಲಿಂಗಪ್ಪಗೌಡ ಕೊರೋನಾ ವೈರಸ್‍ನಿಂದ ಖಾಸಗಿ ಶಾಲೆ ಇನ್ನು ಆರಂಭವಾಗಿಲ್ಲ. ಇದರಿಂದ ಶಾಲಾ ಆಡಳಿತ ಮಂಡಳಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡುವುದು ಕಷ್ಟಕರವಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿವರೆಗೂ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರು, ಶಾಲಾ ಸಿಬ್ಬಂದಿಗೆ ಯಾವುದೇ ಧನ ಸಹಾಯ ಮಾಡಿಲ್ಲ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಶಾಲಾ ಆಡಳಿತ ಮಂಡಳಿಗೆ ಅನುದಾನ ನೀಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಮಹೇಶ ಪಾಟೀಲ, ವಿ.ಎಚ್. ನಂದಿಗಾವಿ, ಸಂಜಯ ಮಾಕನೂರ, ಎಂ.ಎನ್. ದೇಶಗತ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.