2ಎ ಮೀಸಲಾತಿ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು : ಹಟ್ಟಿಹೊಳಿ

  • 12 Jan 2024 , 7:34 PM
  • Belagavi
  • 216

ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮುದಾಯ ಈ ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಬಹುಸಂಖ್ಯೆಯಲ್ಲಿರುವ ಈ ಸಮಾಜದಲ್ಲೂ ಅನೇಕ ಸಾಮಾಜಿಕ ದುರ್ಬಲ ಕುಟುಂಬಗಳಿವೆ. ಇಂಥ ಸಮುದಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರ 2 ಎ ಮೀಸಲಾತಿ ಬೇಡಿಕೆ ಈಡೇರಿಸಲೇಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಅವರು ಧರ್ಮಕ್ಷೇತ್ರ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ, ಬೆಳಗಾವಿ ಹಾಗೂ ಮೂಡಲಗಿ ತಾಲೂಕು-ಅರಬಾವಿ ಮತಕ್ಷೇತ್ರದ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ 2ಎ ಮೀಸಲಾತಿಗೆ ಆಗ್ರಹಿಸಿ ಹಳ್ಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಂಚ ಹಂತದ ಚಳವಳಿಯಲ್ಲಿ ಭಾಗವಹಿಸಿ ಮಾತನಾಡಿದರು. 

ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಸಮಾಜಗಳನ್ನು ಕೇಂದ್ರ ಸರಕಾರದ ಓಬಿಸಿ ಮೀಸಲಾತಿಗೆ ಸೇರ್ಪಡಿಸುವ ಹಕ್ಕೊತ್ತಾಯದ ಚಳವಳಿ  ಬೇಡಿಕೆ ಈಡೇರುವವರೆಗೆ ನಿಲ್ಲದು. ಶ್ರೀಗಳ ನೇತೃತ್ವದ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಬಲ ನೀಡುವ ಕಾರ್ಯಕ್ಕೆ ತಾವು ಸದಾ ಬದ್ಧ ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ ಸಮಾಜದ ಎಲ್ಲ ಮುಖಂಡರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಆರ್. ಕೆ. ಕುಲಕರ್ಣಿ, ರಾಮನಗೌಡ ಪಾಟೀಲ, ಬಿಸಿರೊಟ್ಟಿ ಹಾಗೂ ಪಂಚಮಸಾಲಿ ಸಮಾಜದ ಎಲ್ಲ ಪದಾಧಿಕಾರಿಗಳು  ಉಪಸ್ಥಿತರಿದ್ದರು.

Read All News