ಹಾವೇರಿ: ಜಿಲ್ಲೆಯ ರಾಣೇಬೆನ್ನೂರ ಪಟ್ಟಣದಲ್ಲಿ ನಾಗರ ಪಂಚಮಿ ನಿಮಿತ್ತ ಮಾನವ ಬಂಧತ್ವ ವೇದಿಕೆ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಪಟ್ಟಣದ ಅಂತರವಳ್ಳಿ ವೃತ್ತದ ಹತ್ತಿರವಿರುವ ಅಂಬೇಡ್ಕರ್ ಕಾಲೋನಿಯ ಗುಡಿಸಲು ನಿವಾಸಿಗಳಿಗೆ ಹಾಲು ಹಾಗೂ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಸಂಚಾಲಕ ಚಂದ್ರಣ್ಣ ಬೇಡರ ರಾಜ್ಯದಲ್ಲಿ 20 ರಿಂದ 30 ಸಾವಿರ ಬಡ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವಿಷಾದಿಸಿದ ಅವರು ಜನರು ಇಂತಹ ಅನೇಕ ಮೂಡನಂಬಿಕೆಗಳನ್ನು ಬದಿಯಿಟ್ಟು ಬಡ ಮಕ್ಕಳಿಗೆ ಹಾಲು ಮತ್ತು ಆಹಾರ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು. ಪ್ರಸುತ್ತ ಸಮಾಜದಲ್ಲಿನ ಮೂಡ ನಂಬಿಕೆ ಹೋಗಲಾಡಿಸುವ ಸಲುವಾಗಿ ಪಂಚಮಿ ಹಬ್ಬದಲ್ಲಿ ಕಲ್ಲು ನಾಗರ ದೇವರಿಗೆ ಹಾಲೆರೆಯುವ ಬದಲು ಬಡವರಿಗೆ ಹಂಚಿ ಆರೋಗ್ಯಯುತ ಸಮಾಜವನ್ನು ಕಟ್ಟಲು ಶ್ರಮಿಸ ಬೇಕಿದೆ, ಕಳೆದ 7 ವರ್ಷದಿಂದ ನಾವು ಈ ರೀತಿ ಕಾರ್ಯಕ್ರಮ ಮಾಡುತ್ತಾ ಬರುತ್ತಿದ್ದೇವೆ. ಪ್ರತಿ ವರ್ಷ ಹಾಸ್ಟೆಲ್ ಮಕ್ಕಳಿಗೆ, ಅಂಗವಿಕಲರಿಗೆ ವಿತರಣೆ ಮಾಡುತ್ತಾ ಬಂದಿದ್ದೇವೆ ಆದರೆ ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಗುಡಿಸಲು ನಿವಾಸಿಗಳಿಗೆ ವಿತರಣೆ ಮಾಡಿದೇವೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ತಾಲೂಕು ಸಂಚಾಲಕರಾದ ಕರಿಬಸಪ್ಪ ಕೂಲೇರ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ಜಗದೀಶ ಮುದೇನೂರ, ಮನೀಶ ಪೂಜಾರ, ಹನುಮಂತಪ್ಪ ಕುಪ್ಪೇಲೂರ, ಕುಮಾರ ಹರಿಜನ, ಹಾಲಪ್ಪ ಗುಡಿಯವರ, ಚಂದ್ರಪ್ಪ ಕುಪ್ಪೇಲೂರ, ರಮೇಶ ಸುಂಕಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.