ಬೆಳಗಾವಿ: ಬಸವಣ್ಣನವರ ಲಿಂಗೈಕ್ಯ ದಿನ ಹಾಗೂ ಬಸವ ಪಂಚಮಿಯ ನಿಮಿತ್ತ ಬಸವ ಭೀಮ ಸೇನೆಯ ವತಿಯಿಂದ ನಗರದ ಶ್ರೀ ಬಸವೇಶ್ವರ ಉದ್ಯಾನದಲ್ಲಿ ಶನಿವಾರದಂದು ಆಯೋಜಿಸಲಾಗಿದ್ದ ಧರ್ಮ ಗುರುವಿಗೆ ಗೌರವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಕೊರೋನಾ ವೈರಸ್‍ಗೆ ವ್ಯಾಕ್ಷಿನ್ ಸಿಕ್ಕ ನಂತರ ಮತ್ತೆ ಹೋರಾಟ ಆರಂಭವಾಗಲಿದೆ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನದ ಮಾನ್ಯತೆ ಪಡೆಯುವುದೆ ಧರ್ಮ ಕಟ್ಟಿಕೊಟ್ಟಿರುವ ಬಸವಾದಿ ಶರಣರಿಗೆ ಸಲ್ಲಿಸುವ ನಮ್ಮ ನಿಜವಾದ ಕೃತಜ್ಞತೆ ಸಲ್ಲಿಸುವ ಮೂಲಕ ಧರ್ಮ ಮಾನ್ಯತೆ ಹೋರಾಟವು ಮಾನ್ಯತೆ ಸಿಗುವವರೆಗೆ ಮುಂದುವರೆಯಲಿದೆ ಎಂದು ಬಸವ ಪರ ಸಂಘಟನೆಗಳ ಮುಖಂಡರು ಘೋಷಿಸಿದ್ದಾರೆ. ಬಸವಾದಿ ಶರಣರು ಸ್ಥಾಪಿಸಿರುವ ಲಿಂಗಾಯತ ಧರ್ಮವು ಸಮಾಜೋಧರ್ಮ. ಲಿಂಗಾಯತ ಧರ್ಮಕ್ಕೆ ಸಮಾಜವೇ ದೇವರು. ದೇಶದ ಜನ ಸಂಕಷ್ಟದಲ್ಲಿರುವಾಗ.
ದಿನನಿತ್ಯ ನೂರಾರು ಜನರು ಕೊರೋನಾ ವೈರಸ್‍ಗೆ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ ಸಮಾಜದ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸುವದಾಗಲಿ, ಯಾವುದೇ ಸಂಭ್ರಮಾಚರಣೆ ಮಾಡುವದಾಗಲಿ ಶೋಭೆ ಅಲ್ಲ ಎಂಬ ಮಾನವೀಯ ಜ್ಞಾನ ಬಸವ ಸಮಾಜಕ್ಕೆ ಇದೆ ಎಂದು ಹೇಳಿದರು. ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಅವರನ್ನು ಶ್ರೀಮಠ ಹಾಗೂ ವಿವಿಧ ಬಸವ ಪರ ಸಂಘಟನೆಗಳ ಪರವಾಗಿ ಗೌರವಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧ್ಯಕ್ಷ ಅಲ್ಲಮಪ್ರಭು ಶ್ರೀಗಳು, ಬಸವಣ್ಣನವರು ತೋರಿದ ಮಾರ್ಗದಲ್ಲಿಯೇ ಸಮಾಜದ ಸಂಘಟನೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಬಸವ ಭೀಮ ಸೇನೆಯ ಕಾರ್ಯ ಪ್ರಸಂಶನೀಯವಾಗಿದೆ ಎಂದರು ಆರ್.ಎಸ್.ದರ್ಗೆ ಮಾತನಾಡಿ ಬಸವ ಪಂಚಮಿ ನಿಮಿತ್ಯ ಬಸವ ಭೀಮ ಸೇನೆ ಹಮ್ಮಿಕೊಂಡಿದ್ದ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಅಭಿಯಾನವು ಅತ್ಯಂತ ಯಶಸ್ವಿಯಾಗಿದೆ. ಅಭಿಯಾನಕ್ಕೆ ಸ್ಪಂಧಿಸಿರುವ ಬಸವ ಸಮುದಾಯಗಳಿಗೆ ಋಣಿಯಾಗಿದ್ದೇನೆ ಎಂದರು. ಈ ಸಂಧರ್ಭದಲ್ಲಿ ಮೋಹನ ಗುಂಡ್ಲೂರ ವಚನ ಪ್ರಾರ್ಥನೆ ಸಲ್ಲಿಸಿದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ ಗುಡಸ, ಹಡಪದ ಸಮಾಜದ ಮುಖಂಡ ಬಸವರಾಜ ಹಡಪದ, ಸಮಗಾರ ಸಮಾಜದ ಅಧ್ಯಕ್ಷ ಸಂತೋಷ ಹೊಂಗಲ, ಛಲವಾದಿ ಸಮಾಜದ ಅಧ್ಯಕ್ಷ ದುರ್ಗೇಶ ಮೇತ್ರಿ, ಲಮಾಣಿ ಸಮಾಜದ ಎಲ್.ಎಂ.ಲಮಾಣಿ, ಗಂಗಾಮತ ಸಮಾಜದ ಬಸವರಾಜ ಸುಣಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.