ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲೂಕಿನ ಗ್ರಾಮೀಣ ಪ್ರದೇಶದ ಶೇ.50 ರಷ್ಟು ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೊಂದಾಯಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ.60 ರಷ್ಟು ಕಾರ್ಮಿಕರು 100 ಮಾನವ ದಿನಗಳು ಪೂರ್ಣಗೊಂಡಿದ್ದು, 150 ದಿನ ಏರಿಸುವಂತೆ ಆಗ್ರಹಿಸಿ ತಾಲೂಕು ಪಂಚಾಯಿತಿ ಕಾರ್ಯಾಲಯ ಎದುರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಕೆಲಕಾಲ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ರಾಜು ಆಲದಹಳ್ಳಿ, ಕರೋನಾ ರೋಗದಿಂದ ಕೂಲಿಕಾರರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಮಾದ್ಯಮಗಳಲ್ಲಿ150 ದಿನ ಹೆಚ್ಚಿಸುವುದಾಗಿ ಹೇಳುತ್ತಿದ್ದು, ಆದೇಶ ಜಾರಿಗೊಳಿಸಿಲ್ಲ. ಕೂಲಿಯನ್ನು 275 ಬದಲಾಗಿ ಕನಿಷ್ಟ 350 ರೂ. ಏರಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಕೂಲಿ ದಿನಗಳ ಏರಿಕೆ, ವಾರದೊಳಗೆ ಕೂಲಿ ಹಣ ಜಮೆ, ಮೂಲಭೂತ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು. ಕೂಲಿಕಾರರಿಗೆ ನೆರಳು, ಶುದ್ದ ನೀರು ಒದಗಿಸಬೇಕಿದ್ದ ಅಧಿಕಾರಿಗಳು ಕೊಡಪಾನ ಇಲ್ಲ, ಚಂಬು ಇಲ್ಲವೆಂದು ಸಬೂಬು ಹೇಳುತ್ತಿರುವುದು ಯಾಕೆ..? ವಿಧವೆಯರು, ಅಂಗವಿಕಲರು, ಒಂಟಿ ಮಹಿಳೆಯರು, 60 ವಯೋಮಾನದಾಟಿದವರಿಗೆ ಕೆಲಸದಲ್ಲಿ ಶೇ.50 ರಷ್ಟು ಕೆಲಸದಲ್ಲಿ ರಿಯಾಯ್ತಿಯಿದ್ದು, ಕಾಯ್ದೆಉಲ್ಲಂಘನೆಯಾಗುತ್ತಿದೆ ಎಂದರು. ಕೂಲಿಕಾರ ಶಿವರಾಯಪ್ಪ ಬ್ಯಾಡಗಿ ಮಾತನಾಡಿ, ನಾಲೈದು ತಿಂಗಳಿಂದ ಕೂಲಿನಿರ್ವಹಿಸಿದ 11,970 ರೂ.ಗಳು ಜಮೆಯಾಗಿಲ್ಲ, ಕೂಲಿಯಿಂದ ಹೊಟ್ಟೆ ಹೊರೆಯುವ ನಾವು ಸಂಕಟಎದುರಿಸುತ್ತಿದ್ದೇವೆ. ಗ್ರಾ.ಪಂ. ಅಧಿಕಾರಿ ಎಪ್‍ಡಿಈ ಮಾಡಿದ್ದೇವೆ ಎನ್ನುತ್ತಾರೆ, ಬ್ಯಾಂಕನವರು ಸರ್ಕಾರದಿಂದ ಹಣ ಬಂದಿಲ್ಲವೆನ್ನುತ್ತಾರೆ. ಜಿಲ್ಲಾ ಪಂಚಾಯತಿ ಸಿಇಓರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ತಪ್ಪಿನಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತಿದ್ದು, ಸಾಪ್ಟವೇರ್, ಟೆಕ್ನಿಕಲ್ ಇತ್ಯಾದಿ ಸಮಸ್ಯೆ ಹೇಳುತ್ತಿದ್ದು, ತಪ್ಪಿತಸ್ಥರ ತನಿಖೆ ಮಾಡಿ ಕ್ರಮಕೈಗೊಳ್ಳಬೇಕು.
ಒಂದೆರಡು ದಿನದಲ್ಲಿ ಹಣ ನೀಡದಿದ್ದಲ್ಲಿ ಗ್ರಾ.ಪಂ.ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ.ಜಯಕುಮಾರ ಕೂಲಿಕಾರರ ಮನವಿ ಸ್ವೀಕರಿಸಿ, 100 ದಿನದ ಕೂಲಿಯನ್ನು 150 ಕ್ಕೆ ಏರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಆದೇಶವಾಗಬೇಕಿದೆ. ಕೂಲಿ ಹಣ ಜಮೆ ಮೂಲಭೂತ ಸೌಲಭ್ಯ ನೀಡದಿರುವ, ವಿಶೇಷ ವ್ಯಕ್ತಿಗಳಿಗೆ ರಿಯಾಯ್ತಿ ನೀಡದಿರುವ ಅಧಿಕಾರಿಗಳಿಗೆ ನೋಟಿಸ ಜಾರಿಗೊಳಿಸುವೆ ಎಂದರು.ಈ ವೇಳೆ ಕೂಲಿಕಾರರಾದ ದಾದಾಪೀರ ತಿಳವಳ್ಳಿ, ದುರ್ಗಪ್ಪ ಹುಣಸಿಕಟ್ಟಿ, ಗಣೇಶಪ್ಪ ನಾಗನಗೌಡ್ರ, ಅಂಜಿನೆಪ್ಪ ಹಾದಿಮನಿ, ಮಂಜಪ್ಪ ಹಿರೇಕಾಂಶಿ, ಮಲಕನಗೌಡ್ರ ಪಾಟೀಲ, ನಾಗರಾಜ ಕೋಡಿಹಳ್ಳಿ, ಪುಟ್ಟಪ್ಪ ವೀರಾಪುರ, ಶೇಖಪ್ಪ ನಿಟ್ಟೂರು, ಎಸ್.ಬಿ.ದೇವರಮನಿ, ಗುತ್ತೆಪ್ಪ ತಳವಾರ ಇತರರಿದ್ದರು.