ಹಾವೇರಿ : ಸಮುದಾಯದ ಮಕ್ಕಳಿಗೆ ಉದ್ಯೋಗದ ಜೊತೆ ಶಿಕ್ಷಣ, ಸಂಸ್ಕಾರಕ್ಕೆ ಆದ್ಯತೆ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ಎಸ್.ಎಸ್. ಕಲಬುರ್ಗಿ ತಿಳಿಸಿದರು. ಬ್ಯಾಡಗಿ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಎಸ್‍ಎಸ್‍ಕೆ ಸಮಾಜದ ತಾಲೂಕು ಘಟಕದ ವತಿಯಿಂದ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಸಾರ್ವತ್ರಿಕವಾಗಿದ್ದು, ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಸಮುದಾಯ ಬಾಂಧವರು ಉದ್ಯೋಗ ಕಾಯಕದ ಜೊತೆ ತಮ್ಮ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನಾವು ನೀಡದಿದ್ದಲ್ಲಿ, ಪೈಪೋಟಿ ನೀಡಲು ಸಾದ್ಯವಿಲ್ಲ. ಸರ್ಕಾರಿ ಸೇರಿದಂತೆ ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಯನ್ನು ನೀಡುತ್ತಿದ್ದಾರೆ. ಔಧ್ಯೋಗಿಕ ಬೆಳವಣಿಗೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಬೇಡಿಕೆಯಿದ್ದು ವಿದ್ಯಾರ್ಥಿ ಹಂತದಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಉತ್ತಮ ವಾತಾವರಣ ಕಲ್ಪಿಸಿಬೇಕು ಎಂದರು.
ವಿದ್ಯಾರ್ಥಿನಿ ಸಾಧನೆಯ ಹಿಂದೆ ಪಾಲಕರ ಪರಿಶ್ರಮವಿದೆ. ಶಿಕ್ಷಕರ ಮಾರ್ಗದರ್ಶನದ ಜೊತೆಗೆ ವಿದ್ಯಾರ್ಥಿನಿಯ ಶ್ರದ್ದೆ, ದೃಡನಿರ್ಧಾರ, ಸತತ ಪರಿಶ್ರಮ ಉತ್ತಮ ಪಲಿತಾಂಶಕ್ಕೆ ನಾಂದಿಯಾಗಿದೆ. ರಾಣೇಬೆನ್ನೂರಿನ ರೋಟರಿ ಪದವಿ ಪೂರ್ವ ಕಾಲೇಜನಲ್ಲಿ ವ್ಯಾಸಂಗ ಮಾಡಿದ ಐಶ್ವರ್ಯ ನಾಗರಾಜ ಲದ್ವಾ ವಾಣಿಜ್ಯ ವಿಭಾಗದಲ್ಲಿ ಶೇ. 98.5 (591) ಅಂಕಪಡೆದು ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಆರನೇ ಸ್ಥಾನಗಳಿಸಿದ್ದಾಳೆ. ಸಮಾಜದ ಎಲ್ಲ ಮಕ್ಕಳಿಗೆ ಮಾದರಿಯಾಗಿರುವ ವಿದ್ಯಾರ್ಥಿನಿ ಸಾಧನೆ ಪ್ರಶಂಸೆಯಾಗಿದ್ದು, ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಇನ್ನಷ್ಟು ಸ್ಪೂರ್ತಿ ತುಂಬಬೇಕಿದೆ ಎಂದರು. ಈ ಸಂದರ್ಭದಲ್ಲಿ ಎಸ್‍ಎಸ್‍ಕೆ ಸಮಾಜದ ಉಪಾಧ್ಯಕ್ಷ ನಾಗರಾಜ ಲದ್ವಾ, ಕಾರ್ಯದರ್ಶಿ ನಾರಾಯಣಸಾ ಕಾಟವಾ, ಮಾಧುಸಾ ಚವ್ಹಾಣ, ವಿಠ್ಠಲ ಬದಿ, ಏಕನಾಥಸಾ ಬಾಕಳೆ, ರೇಣುಕಾಸಾ ಬದ್ದಿ, ಕೃಷ್ಣಾ ಕಲಬುರ್ಗಿ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾಬಾಯಿ ಕಲಬುರ್ಗಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.