ಈ ಬಾರಿ ಸರಳವಾಗಿ ಆಚರಿಸುವ ರಾಣೇಬೆನ್ನೂರ ಕಾ ರಾಜಾ ಗಣೇಶೋತ್ಸವ

  • 15 Jan 2024 , 3:06 AM
  • Haveri
  • 335

ರಾಣೇಬೆನ್ನೂರ : ನಗರದಲ್ಲಿ ಪ್ರತಿವರ್ಷ ಪ್ರತಿಷ್ಠಾಪಿಸುವ 'ರಾಣೇಬೆನ್ನೂರ ಕಾ ರಾಜಾ' ಗಣಪತಿಯ 12ನೇ ವರ್ಷದ ಪ್ರತಿಷ್ಠಾಪನೆ ಉತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುವುದು ಎಂದು ವಂದೇ ಮಾತರಂ ಸ್ವಯಂ ಸೇವಾ ಸಂಘದ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿಯಮಗಳನ್ನು ಪಾಲನೆ ಮಾಡಬೇಕಾದಲ್ಲಿ ಹಾಗೂ ತಾಲೂಕಿನಲ್ಲಿ ಈಗಾಗಲೇ ಕರೋನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಳವಾಗು ಆಚರಿಸಲು ನಿರ್ಧರಿಸಲಾಗಿದೆ. ಆದರೇ ಈ ಬಾರಿ 10 ಲಕ್ಷ ರೂ. ವೆಚ್ಚದಲ್ಲಿ 10 ಕೆ.ಜಿ. ತೂಕದ 24 ಇಂಚು ಬೆಳ್ಳಿಯ ಗಣಪತಿ ಮೂರ್ತಿಯನ್ನು ಮಾಡಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನದಂದು ಸಮಿತಿಯ ಐದರಿಂದ ಆರು ಸದಸ್ಯರು ಮಾತ್ರ ಗಣೇಶನನ್ನು ತಂದು 'ರಾಣೇಬೆನ್ನೂರು ಕಾ ರಾಜಾ' ಮೂಲ ಜಾಗವಾದ ಕುರುಬಗೇರಿಯ ಬುರಡಿಕಟ್ಟಿ ಚಾಳದಲ್ಲಿ ಪ್ರತಿಷ್ಠಾಪಿಸಲಾಗುವುದು. ಅದೇ ದಿನ ಸಂಜೆ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದರು.

ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಎರಡೂ ಸಮಯದಲ್ಲಿ ಸಮಿತಿಯ ಸದಸ್ಯರನ್ನು ಹೊರತು ಪಡಿಸಿ ಬೇರೆಯವರಿಗೆ ಅವಕಾಶವಿಲ್ಲ ಬೆಳ್ಳಿಯ ಗಣಪತಿ ಮೂರ್ತಿಯನ್ನು ಗಣೇಶೋತ್ಸವದ ಬಳಿಕ ನಗರದ ಯಾವುದಾದರೂ ದೇವಸ್ಥಾನಕ್ಕೆ ದಾನವಾಗಿ ನೀಡಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ರಾಜು ಅಡ್ಮನಿ, ಹನುಮಂತಪ್ಪ, ಶಂಭು ಮಾಕನೂರು ಸೇರಿದಂತೆ ಮತ್ತಿತರರು ಇದ್ದರು.

Read All News