ಬೆಳಗಾವಿ: ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ 53ನೇ ಮಾನಸಿಕ ಸುವಿಚಾರ ಚಿಂತನದ ಅಂಗವಾಗಿ ವಿಶೇಷವಾದ ಕಾರ್ಯ ಜರುಗಿತು. ಸಭೆ ನಡೆಯಲಿಲ್ಲ. ಉಪನ್ಯಾಸ ಯಾರೂ ಮಾಡಲಿಲ್ಲ. ಆದರೂ ಸುವಿಚಾರ ಚಿಂತನ ನಡೆಯಿತು. ಸುವಿಚಾರ ಚಿಂತನ ಎಂದರೆ ಒಳ್ಳೆಯ ವಿಚಾರಗಳನ್ನು ಜನರಿಗೆ ತಿಳಿಸುವುದು. ಒಳ್ಳೆಯ ಕಾರ್ಯವನ್ನು ಮಾಡಿದರೂ ಅದು ಸುವಿಚಾರ ಚಿಂತನ ಎನ್ನುವುದು ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಅನಿಸಿಕೆ.
ಏಪ್ರಿಲ್ ತಿಂಗಳಲ್ಲಿ ನಡೆಯುವ ಸುವಿಚಾರ ಚಿಂತನ ಭಾಷಣವಾಗದೆ, ಒಬ್ಬ ವಿಕಲಚೇನನ ಬದುಕಿಗೆ ಆಧಾರ ಸ್ಥಂಬವಾಗಿತ್ತು. ಇಸ್ಲಾಂಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ನಡೆಸುತ್ತಿರುವ ಕಿರಣ ಫಕೀರಪ್ಪ ಕ್ಯಾಮನಕೋಲ ಎಂಬ ವಿದ್ಯಾರ್ಥಿಗೆ ಕೈಯಿಲ್ಲ. ಈತನಿಗೆ ಕೈ ಇಲ್ಲ ಎಂಬುದನ್ನು ತಿಳಿಸಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಏಪ್ರಿಲ್ ತಿಂಗಳ ಸುವಿಚಾರ ಚಿಂತನ ಕಾರ್ಯಕ್ರಮ ಮಾಡುವುದು ಬೇಡ ಕಾರ್ಯಕ್ರಮದ ಹಣವನ್ನು ವಿದ್ಯಾರ್ಥಿಗೆ ಕೊಡುವುದಾಗಿ ತಿರ್ಮಾನಿಸಿ ವಿಕಲಚೇತನ ಕಿರಣಗೆ 11 ಸಾವಿರ ನಗದು ಹಣವನ್ನು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಖ್ಯಾತ ಉದ್ಯಮಿ ಮಹೇಶ ಶಿಂಗೆ ಮಾತನಾಡಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಇತರೆ ಮಠಗಳಿಗೆ ಹೋಲಿಸಿದರೆ ಸಾಕಷ್ಟು ಸಮಾಜ ಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಕೈ ಇರದ ವಿದ್ಯಾರ್ಥಿಗೆ ಸಹಾಯ ಹಸ್ತ ಚಾಚುವುದನ್ನು ನೋಡಿದರೆ ಅವರ ಪ್ರೇರಣೆಯಿಂದ ನಮ್ಮ ಸಂಸ್ಥೆಯಿಂದ ಕಿರಣಗೆ ಕೃತಕ ಕೈ ಜೋಡಿಸುವ ಕಾರ್ಯವನ್ನು ಮಾಡುತ್ತೇವೆ. ಮುಂಗೈ ಮೇಲೆ ಬಾಲಕನ ಕೈ ಕಟ್ ಆಗಿರುವುದರಿಂದ ಅಮೇರಿಕಾದ ನುರಿತ ವೈದ್ಯರ ಸಲಹೆಯನ್ನು ಪಡೆದು ಈ ಸೇವೆಯನ್ನು ಮಾಡುತ್ತೇವೆ. ಇದಕ್ಕೆ ಸ್ಪೂರ್ತಿ ಶ್ರೀಗಳು ಎಂದರು.
ಹುಕ್ಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಮಾತನಾಡಿ, ಹುಕ್ಕೇರಿ ತಾಲೂಕಿನ ಈ ವಿಧ್ಯಾರ್ಥಿ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾನೆ. ಕೈ ಇಲ್ಲದಿದ್ದರೂ ಕೈ ಯಿಂದ ಮತ್ತು ಕಾಲಿನಿಂದ ಬರೆಯುವ ಜತೆಗೆ ತಾನೆ ಸ್ವಯಂ ಕೆಲಸ ಮಾಡುತ್ತಿರುವುದು ಸಂತೋಷವಾಗಿದೆ. ಎಲ್ಲ ಸಂದರ್ಭದಲ್ಲಿಯೂ ಹುಕ್ಕೇರಿ ಹಿರೇಮಠ ನಮ್ಮ ಇಲಾಖೆಯ ಜತೆಗೆ ಇದೆ. ಈ ವಿದ್ಯಾರ್ಥಿಗೆ ಪ್ರೋತ್ಸಾಹಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಇಸ್ಲಾಂಪುರದ ಕನ್ನಡ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರು ಮತ್ತು ಕಿರಣ ತಾಯಿ ಉಪಸ್ಥಿತರಿದ್ದರು.