ಪ್ರಾಚಾರ್ಯರ ಸಂಘದ ಕಾರ್ಯಾಧ್ಯಕ್ಷರಾಗಿ ದ್ಯಾಮನಕೊಪ್ಪ ಆಯ್ಕೆ

  • 14 Jan 2024 , 9:56 PM
  • Haveri
  • 105

ಹಾವೇರಿ: ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಕಾರ್ಯಾಧ್ಯಕ್ಷ ಪ್ರಾ. ಎಸ್ ಎಚ್ ಕಬ್ಬಿನಕಂತಿಮಠ ಇವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಇವರನ್ನು ಪದವಿಪೂರ್ವ ನೌಕರರ ಭವನದಲ್ಲಿ ನಡೆದ ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ ಆಂಜನೇಯ ಅವರು ಸಂಘದ ಬೈಲಾವನ್ನು ಸಮಗ್ರವಾಗಿ ಪರಿಶೀಲಿಸಿ ನೂತನ ಕಾರ್ಯಾಧ್ಯಕ್ಷರ ಆಯ್ಕೆಗೆ ಹಸಿರು ನಿಶಾನೆ ತೋರಿಸಿದರು ಹಾಗೂ ಬೈಲಾದ ನಿಯಮಾವಳಿಯಂತೆ ಆಯ್ಕೆ ನಡೆಯುವಂತೆ ನೋಡಿಕೊಂಡರು ನಂತರ ಮಾತನಾಡಿದ ಅವರು ಸಂಘಟನೆಯ ಶಕ್ತಿ ಬಹಳ ದೊಡ್ಡದು ಪದಾಧಿಕಾರಿಗಳು ಸಂಘಕ್ಕೆ ತಮ್ಮ ಬದ್ಧತೆಯನ್ನು ತೋರುವ ಮೂಲಕ ಸಂಘದ ಏಳಿಗೆಗಾಗಿ ಶ್ರಮಿಸಬೇಕೆಂದು ತಿಳಿಸಿದರು.

ನೂತನವಾಗಿ ಆಯ್ಕೆಯಾದ ಕಾರ್ಯಾಧ್ಯಕ್ಷ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಅನೇಕ ಸವಾಲುಗಳ ಸಂದರ್ಭದಲ್ಲಿ ನಾನು ಅಧ್ಯಕ್ಷನಾಗಿದ್ದೇನೆ ಈ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯರ, ಎಲ್ಲ ಪ್ರಾಚಾರ್ಯರ ಹಾಗೂ ಇಲಾಖೆಯ ಉಪನಿರ್ದೇಶಕರ ಮಾರ್ಗದರ್ಶನದಲ್ಲಿ ಸಂಘದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಹೇಳಿದ ಅವರು ಎಲ್ಲರ ಸಹಕಾರವನ್ನು ಕೋರಿದರು.

ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಸಿ ಪಿ ಹರವಿ, ಪ್ರಚಾರ್ಯರಾದ ವೀರಭದ್ರಯ್ಯ, ಆನಂದ ಮುದಕಮ್ಮನವರ ಮುಂತಾದವರು ಮಾತನಾಡಿದರು. ಪ್ರಾಚಾರ್ಯ ಸಂಘದ ನಿರ್ದೇಶಕರುಗಳಾದ ಯು ಆರ್ ಪಾಟೀಲ, ಯು ಬಿ ಪಾಟೀಲ, ರಮಾಕಾಂತ ಭಟ್, ಅಳಲಗೇರಿ, ನರೇಗಲ್ಲಮಠ ಹಾಗೂ ಶ್ರೀಮತಿ ಅನಿತಾ ಹೊಸಮನಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read All News