ಬೆಳಗಾವಿ: ಸರ್ಕಾರದ ಮಾರ್ಗಸೂಚಿಯ ಪ್ರಕಾರ ನಾಡಪ್ರಭು ಕೆಂಪೇಗೌಡ ಜಯಂತಿ ಸೋಮವಾರ ಹಾಗೂ ಜುಲೈ. 2 ರಂದು ಡಾ. ಘ. ಗು ಹಳಕಟ್ಟಿ ಅವರ ಜಯಂತಿಯನ್ನು ನಗರದ ಕಟ್ಟಿಮನಿ ಸಭಾಂಗಣದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ(ಜೂ.24) ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡ ಜಯಂತಿಯ ವೇದಿಕೆಯ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಚನ ಸಾಹಿತ್ಯ, ಕೆಂಪೇಗೌಡ ಜೀವನ ಚರಿತ್ರೆ ಹಾಗೂ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮಳೆಗಾಲ ಇರುವುದರಿಂದ ಮೆರವಣಿಗೆ ಕಾರ್ಯಕ್ರಮ ಸಿದ್ಧತೆಗೆ ತೊಂದರೆ ಎದುರಾಗಬಹುದು ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯ ವೇದಿಕೆ ಕಾರ್ಯಕ್ರಮದ ಮೂಲಕ ಜಯಂತಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಜುಲೈ.2 ರಂದು ನಡೆಯಲಿರುವ ಘ. ಗು ಹಳಕಟ್ಟಿ ಅವರ ಜಯಂತಿ ಆಚರಣೆಗೆ ವಚನ ಕಟ್ಟೆಗಳ ಮೆರವಣಿಗೆ ಕಾರ್ಯಕ್ರಮ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಿ ತಿಳಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಎ. ವಾಯ್ ಬೆಂಡಿಗೇರಿ, ಸಿ.ಎಂ ಬೂದಿಹಾಳ, ಬಿ. ವಿ ಮಿಂಡೊಳ್ಳಿ, ಬಸವರಾಜ ರೊಟ್ಟಿ, ಅಶೋಕ ಮಳಗಲಿ ಹಾಗೂ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.