ಬೆಳಗಾವಿ ಎಸ್ಪಿ ನಿಂಬರಗಿ ವರ್ಗಾವಣೆ

  • 15 Jan 2024 , 3:37 AM
  • Belagavi
  • 193

ಬೆಳಗಾವಿ: ಪಾರದರ್ಶಕತೆಯಿಂದ ಆಡಳಿತ ನಡೆಸಿ ಜಿಲ್ಲೆಯ ಜನರ ಪ್ರೀತಿ, ವಿಶ್ವಾಸಗಳಿಸಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಬೆಂಗಳೂರಿನ ಪಶ್ಚಿಮ ವಲಯದ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ. ಅವರ ಜಾಗೆಗೆ ಸಂಜೀವ ಪಾಟೀಲ ಅವರನ್ನು ಸರಕಾರ ಬೆಳಗಾವಿ ಎಸ್ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಮಾದರಿ ಮಾಡಿಕೊಟ್ಟಿದ್ದ ನಿಂಬರಗಿ ಕೊಲೆ, ಸುಲಿಗೆ ಮಾಡುವವರಿಗೆ ಲಕ್ಷ್ಮಣ ರೇಖೆ ಹಾಕಿ ಹೇಡೆಮುರಿ ಕಟ್ಟಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಸಣ್ಣ ಪುಟ್ಟ ಘಟನೆ ಹೊರತು ಪಡಿಸಿದರೆ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದಾರೆ.

ಇಡೀ ವಿಶ್ವವನ್ನೇ ಕಾಡಿದ್ದ ಹೆಮ್ಮಾರಿಯ ಸೋಂಕಿನ ಆರ್ಭಟದ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿದ್ದ ಬೆಳಗಾವಿ ಗಡಿ‌ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಿ ಹೆಮ್ಮಾರಿಯ ಸೋಂಕು‌ ಜಿಲ್ಲೆಗೆ ಹೆಚ್ಚು ವ್ಯಾಪಿಸದಂತೆ ನೋಡಿಕೊಂಡಿದ್ದರು.

ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ , ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ ಎಸ್ಪಿ ನಿಂಬರಗಿ ಅವರಿಗೆ ಸರಕಾರ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಿದ್ದು ಜಿಲ್ಲೆಯ ಜನರಿಗೆ ಬೇಸರ ತರಿಸಿದರೂ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡಿದ ರೀತಿಯಲ್ಲೇ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿ ಇಲಾಖೆಯ ಘನತೆ ಎತ್ತಿ ಹಿಡಿಯಲಿ ಎಂದು ಜಿಲ್ಲೆಯ ಜನ ಲಕ್ಷ್ಮಣ ನಿಂಬರಗಿ ಅವರಿಗೆ ಶುಭ ಹಾರೈಸಿದ್ದಾರೆ.

Read All News