ಜಂಗಮ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ ಸರಕಾರ

  • 15 Jan 2024 , 1:38 AM
  • Bengaluru
  • 101

ಬೆಂಗಳೂರು: ಬೇಡ ಜಂಗಮ ಸಮುದಾದವರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲು ಸರಕಾರ ನಿರ್ಲಕ್ಷ್ಯವಹಿಸುತ್ತಿರುವುದರನ್ನು ಖಂಡಿಸಿ ಹಾಗೂ ಸಮಾಜದ ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಮುಖಂಡರ ಮೇಲೆ ಸರ್ಕಾರ ಹಾಗೂ ಅಧಿಕಾರಿಗಳು ಜಾತಿ ನಿಂದನೆ ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಪ್ರೀಡಂ ಪಾರ್ಕ್‌ನಲ್ಲಿ ಚಲೋ ಜೈಲ್ ಬರೋ, ಬೇಡ ಜಂಗಮರ ಸತ್ಯ ಪ್ರತಿಪಾದನಾ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಜಂಗಮ ಸಮುದಾಯದವರನ್ನು ರಾಜ್ಯದ ಪ್ರಮುಖ ಟೋಲ್ ಗೆಟ್ ಬಳಿ ಪೊಲೀಸರು ತಡೆದು ಪ್ರತಿಭಟನೆ ಹತ್ತಿಕ್ಕುವ ಹುನ್ನಾರ ನಡೆಸಿದ್ದು, ಇದರ ನಡುವೆಯೇ ಸಮುದಾಯದ ಬಾಂಧವರು ಟೋಲ್ ಗೆಟ್ ಬಳಿ ಸಂವಿಧಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಧಿಕಾರಿಗಳನ್ನು ಬಳಸಿಕೊಂಡು ಅಖಿಲ ಭಾರತ ಕರ್ನಾಟಕ ಡಾ. ಅಂಬೇಡ್ಕರ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಡಿ.ಹಿರೇಮಠ ಅವರ ಮೇಲೆ ಜಾತಿ ನಿಂದನೆ ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ ಬೇಡ ಜಂಗಮರ ಮೇಲೆ ಸರ್ಕಾರ ಮತ್ತು ಅಧಿಕಾರಿಗಳು ದಬ್ಬಾಳಿಕೆ ನಡೆಸುವ ಕಾರ್ಯವನ್ನು ಮಾಡುತ್ತಿದೆ. ನ್ಯಾಯ ಸಮ್ಮತವಾಗಿ ಬೇಡ ಜಂಗಮರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡದೆ ಸತಾಯಿಸುತ್ತಿದ್ದಾರೆ ಎಂದು ಸತ್ಯ ಪ್ರತಿಪಾದನಾ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಸಮುದಾಯದವರನ್ನು ಸರಕಾರ ಪೊಲೀಸರ ಮೂಲಕ ತಡೆ ಹಿಡಿದಿದ್ದು ಸಮುದಾಯದ ಮುಖಂಡರು ಖಂಡಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾಕ್೯ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಬೇಕಾಗಿದ್ದ‌ ಬಿ.ಡಿ.‌ಹಿರೇಮಠ ಅವರು 8 ಗಂಟೆಯಿಂದಲೇ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಅಲ್ಲದೆ, ಸರಕಾರ ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿದರೂ ಬೇಡಜಂಗಮರು ಯಾವ ಸ್ಥಳದಲ್ಲಿ ಇದ್ದಾರೋ ಅಲ್ಲಿಯೇ ಉಪವಾಸ ಸತ್ಯಾಗ್ರಹವನ್ನು ಆರಂಭಿಸಬೇಕೆಂದು ಹಿರೇಮಠ ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಜಂಗಮ ಸಮುದಾಯದ 40 ಲಕ್ಷ ಜನಸಂಖ್ಯೆ ಇದೆ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಇದನ್ನು ಹತ್ತಿಕ್ಕುವುದು ಸರಕಾರದ‌ ಹಾಗೂ ಪೊಲೀಸ್ ಇಲಾಖೆಯ ಧರ್ಮವಲ್ಲ. ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕೋಲಾರ, ರಾಯಚೂರು, ಬಾಗಲಕೋಟೆ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜಂಗಮರನ್ನು ಪೊಲೀಸರು ತಡೆದಿದ್ದಾರೆ. ಜಂಗಮರು ಶಾಂತಿ ಪ್ರಿಯರು ಇಲ್ಲಿಯವರೆಗೂ ತಮಗೆ ಅನ್ಯಾಯವಾದರೂ ಸಹನೆ ಮಾಡಿಕೊಂಡು‌ ಬಂದಿದ್ದಾರೆ. ಸರಕಾರ ಮತ್ತು ಪೊಲೀಸ್ ಇಲಾಖೆ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಿದರೆ ಜಂಗಮರ ಶಾಪ ತಟ್ಟುವುದು ನಿಶ್ಚಿತ ಎಂದು ಹೋರಾಟಗಾರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Read All News