ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

  • 15 Jan 2024 , 3:36 AM
  • Haveri
  • 103

ರಾಣೇಬೆನ್ನೂರ : ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ನಗರದ ಬಸ್‍ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಸಂಘದ ರವೀಂದ್ರಗೌಡ ಪಾಟೀಲ ಮಾತನಾಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದು ರೈತರನ್ನು ಒಕ್ಕಲುತನದಿಂದ ಹೊರಹಾಕಿ ಖಾಸಗಿ ಕಂಪನಿಗಳಿಗೆ ಮತ್ತು ಬಂಡವಾಳ ಶಾಹಿಗಳಿಗೆ ಕೃಷಿ ಭೂಮಿಯನ್ನು ವರ್ಗಾಯಿಸುವ ಕುತಂತ್ರವಾಗಿದೆ. ಸರಕಾರದ ಕ್ರಮವು ರೈತರ ಹಿತಕ್ಕೆ ಮಾರಕವಾಗಿದೆ. ಈ ಕಾಯ್ದೆಯಿಂದ ರಾಜ್ಯದಲ್ಲಿ ಶೇ.80 ರಷ್ಟು ಸಣ್ಣರೈತರು ಮೊದಲ ಹಂತದಲ್ಲಿ ಕೃಷಿ ಕ್ಷೇತ್ರದಿಂದ ಕಣ್ಮರೆಯಾಗುತ್ತಾರೆ. ಆದ್ದರಿಂದ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳುವುದು ಅನಿವಾರ್ಯತೆ ಎದುರಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ವ್ಯಾಪಾರಸ್ಥರು ಕೃಷಿ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಯಾರಿಂದ ಬೇಕಾದರೂ ಖರೀದಿಸಬಹುದು. ಬೆಲೆಯಲ್ಲಿ ಅಥವಾ ತೂಕದಲ್ಲಿ ಹಾಗೂ ಹಣದ ಪಾವತಿಯಲ್ಲಿ ರೈತರಿಗೆ ಮೋಸವಾದರೆ ಈ ಕಾಯ್ದೆಯಿಂದ ಯಾವುದೇ ಕ್ರಮ ಜರುಗಿಸಲು ಆಗುವುದಿಲ್ಲ. ಆದ್ದರಿಂದ ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ನಾಗರಾಜ ಸೂರ್ವೆ, ದಿಳ್ಳೆಪ್ಪ ಸತ್ಯಪ್ಪನವರ, ಸುರೇಶಪ್ಪ ಗರಡಿಮನಿ, ಜಯಣ್ಣ ಮಾಗನೂರ, ಬಿ.ಕೆ.ರಾಜನಹಳ್ಳಿ, ಚಮನಸಾಬ್ ಶೇತಸನದಿ, ನಾಗನಗೌಡ ಪಾಟೀಲ, ಹನುಮಂತಪ್ಪ ಯಲ್ಲಕ್ಕನವರ, ಮೆಹಬೂಬ್‍ಅಲಿ ಮುದೇನೂರ, ಕರಬಸಪ್ಪ ಕೂಲೇರ ಸೇರಿದಂತೆ ಮತ್ತಿತರರಿದ್ದರು.

Read All News