ರೈತರ ಹಕ್ಕನ್ನು ಕಿತ್ತುಕೊಳ್ಳುವ ದೊಡ್ಡ ಹುನ್ನಾರ ನಡೆದಿದೆ ಇದನ್ನು ತಡೆಯಲು ರೈತ ಸಂಘದಿಂದ ತಹಶಿಲ್ದಾರಗೆ ಮನವಿ

  • 15 Jan 2024 , 3:34 AM
  • Haveri
  • 128

ಬ್ಯಾಡಗಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶಾದ್ಯಂತ ಸಾರ್ವಜನಿಕರು ಕರೋನಾ ರೋಗದ ಭೀತಿಯಲ್ಲಿರುವ ವೇಳೆ, ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆ ಮೂಲಕ ಸರ್ಕಾರಗಳು ರೈತರ ಹಕ್ಕನ್ನು ಕಿತ್ತುಕೊಳ್ಳುವ ದೊಡ್ಡ ಹುನ್ನಾರ ನಡೆಸಿವೆ ಎಂದು ರಾಜ್ಯ ಹಸಿರು ಸೇನೆ ಹಾಗೂ ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ ಬಣ ತಾಲೂಕಾಧ್ಯಕ್ಷ ಎಂ.ಎನ್.ನಾಯಕ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ತಹಸೀಲ್ದಾರ ಕಾರ್ಯಾಲಯಕ್ಕೆ ಕಾರ್ಯಕರ್ತರೊಂದಿಗೆ ಮಂಗಳವಾರ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ, ಬಳಿಕ ಅವರು ಮಾತನಾಡಿದರು ಸರ್ಕಾರ ಜಾರಿಗೊಳಿಸುತ್ತಿರುವ ಭೂಸುಧಾರಣೆ ಹಾಗೂ ಎಪಿಎಂಸಿ ಮತ್ತು ಖಾಸಗಿ ವಿದ್ಯುತ್, 2019 ಬೀಜ ಕಾಯ್ದೆ ಸೇರಿದಂತೆ ವಿವಿಧ ರೈತವಿರೋಧಿ ಕಾಯ್ದೆಗಳ ವಿರುದ್ದ ರೈತರು ನಿರಂತರವಾಗಿ ಹೋರಾಟ ಮುಂದುವರೆಸಲಿದ್ದಾರೆ. ಉಳ್ಳವರ, ದೊಡ್ಡ ಉದ್ದಿಮೆಗಳ ಪರವಾಗಿ ಸರ್ಕಾರ ಕಾಯ್ದೆಯನ್ನು ಅನುಕೂಲ ಮಾಡಿಕೊಟ್ಟಿದೆ. ಭೂಮಿಯನ್ನೆ ದೇವರೆಂದು ನಂಬಿ ದೇಶಕ್ಕೆ ಅನ್ನ ನೀಡುವ ರೈತರ ಜಮೀನಿಗೆ ಕನ್ನಹಾಕುವ ಮೋಸದ ಯೋಜನೆಯನ್ನು ಎಂದಿಗೂ ನಾವು ಸಹಿಸಲ್ಲ, ರಾಜ್ಯಾದ್ಯಂತ ನಮ್ಮ ರೈತಸಂಘ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಿದ್ದವಾಗಿದೆ.

ಈ ಕುರಿತು ಪ್ರತಿಗ್ರಾಮಕ್ಕೂ ತೆರಳಿ ರೈತರ ತಂಡ ಕಟ್ಟಿಕೊಂಡು ರೈತಜಾಗೃತಿ ಮಾಡುತ್ತೇವೆ . ಬೀಜ ಕಂಪನಿಗಳು ರೈತನಿಗೆ ಮೋಸ ಮಾಡಿದಾಗ ಎಲ್ಲಿ ನ್ಯಾಯ ಕೇಳಬೇಕು. ಈ ವ್ಯವಸ್ಥೆ ಬದಲಿಸಿ, ಬೀಜ ಪರೀಕ್ಷೆ ರೈತರು ದೂರು ನೀಡಲು ಜಿಲ್ಲಾ ಮಟ್ಟದಲ್ಲಿ ಸರ್ಕಾರ ಕಚೇರಿ ತೆರೆಯಬೇಕು. ಕಂಪನಿಗಳ ಬೀಜ ಪೂರೈಸಿದ ಬಳಿಕ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಹೊರಬೇಕೆಂದು ಎಂದು ಎಂ.ಎನ್.ನಾಯಕ ಅವರು ಆಗ್ರಹಿಸಿದರು.‌ಬಳಿಕ ತಹಸೀಲ್ದಾರ ಶರಣಮ್ಮ ಕಾರಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ರೈತಮುಖಂಡರಾದ ಸದಾಶಿವ ಎಲ್, ಹೆಚ್.ಎ.ಹಾವೇರಿ, ಬಿ.ಎ.ನಡುವಿನಮನಿ, ಬಸವರಾಜ ಕಾಗಿನೆಲೆ ಉಪಸ್ಥಿತರಿದ್ದರು.

Read All News