ಪುಣ್ಯಕೋಟಿ ದತ್ತು ಯೋಜನೆ ಸಮರ್ಪಕ ಜಾರಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

  • 14 Jan 2024 , 11:15 PM
  • Belagavi
  • 118

ಬೆಳಗಾವಿ: ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೂಡ ಹಸು ಮತ್ತಿತರ ಜಾನುವಾರುಗಳನ್ನು ದತ್ತು ಪಡೆದುಕೊಳ್ಳಲು ಅನುಕೂಲವಾಗುವಂತೆ ಸರಕಾರ ಜಾರಿಗೆ ತಂದಿರುವ "ಪುಣ್ಯಕೋಟಿ ದತ್ತು ಯೋಜನೆ" ಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. .

ಜಿಲ್ಲೆಯಲ್ಲಿರುವ ಖಾಸಗಿ ಹಾಗೂ ಸರಕಾರಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ದತ್ತು ಪಡೆಯಬಹುದಾಗಿದೆ.

ಸದ್ಯಕ್ಕೆ ಜಿಲ್ಲೆಯಲ್ಲಿರುವ 13 ಗೋಶಾಲೆಗಳಲ್ಲಿ ಒಟ್ಟಾರೆ 1226 ಹಸು ಮತ್ತಿತರ ಜಾನುವಾರುಗಳು ಪುಣ್ಯಕೋಟಿ ದತ್ತು ಯೋಜನೆಯಡಿಯಲ್ಲಿ ನೋಂದಣಿ ಮಾಡಲಾಗಿದೆ.

ನೋಂದಾಯಿತ ಜಾನುವಾರುಗಳ ಪೈಕಿ ಈಗಾಗಲೇ 28 ಜಾನುವಾರುಗಳನ್ನು ವಾರ್ಷಿಕ 11 ಸಾವಿರ ರೂಪಾಯಿ ಪಾವತಿಸಿ ದಾನಿಗಳು ದತ್ತು ಪಡೆದುಕೊಂಡಿರುತ್ತಾರೆ. ಇದರಿಂದ 3.47 ಲಕ್ಷ ದೇಣಿಗೆ ಸಂಗ್ರಹಿಸಲಾಗಿರುತ್ತದೆ.

ಸಾರ್ವಜನಿಕರು ಒಂದು ಪ್ರಾಣಿಗೆ ಮೂರು ತಿಂಗಳಿಗೆ ರೂ. 2500; ಆರು ತಿಂಗಳಿಗೆ ರೂ.5,500 ಹಾಗೂ ವಾರ್ಷಿಕ 11,000 ರೂಪಾಯಿ ಪಾವತಿಸಿ ದತ್ತು ಸ್ವೀಕರಿಸಬಹುದು.

ಪ್ರತ್ಯೇಕಆ್ಯಪ್ರಚನೆ:

ಪುಣ್ಯಕೋಟಿ ದತ್ತು ಯೋಜನೆ ಮೂಲಕ ಗೋಶಾಲೆಗಳ ಜಾನುವಾರುಗಳನ್ನು ದತ್ತು ಸ್ವೀಕರಿಸಲು ಮುಂದಾಗುವ ದಾನಿಗಳಿಗೆ ಲಭ್ಯವಿರುವ ಪ್ರಾಣಿಗಳ ಕುರಿತು ಛಾಯಾಚಿತ್ರಗಳ ಸಮೇತ ಮಾಹಿತಿಯನ್ನು ಒದಗಿಸಲು ಪ್ರತ್ಯೇಕ ಆ್ಯಪ್ ಸಿದ್ಧಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಆಸಕ್ತ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಈ ಆ್ಯಪ್ ಮೂಲಕ ದತ್ತು ಪಡೆಯಬಹುದು. ಇದಲ್ಲದೇ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೆಶಕರು ಹಾಗೂ ತಾಲ್ಲೂಕುಗಳಲ್ಲಿ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ದತ್ತು ಪ್ರಕ್ರಿಯೆ ನಡೆಸಬಹುದು ಎಂದರು.

ಸರಕಾರಿಗೋಶಾಲೆಗಳಸೇರ್ಪಡೆಗೆಸೂಚನೆ:

ಎಲ್ಲ ಸರಕಾರಿ ಗೋಶಾಲೆಗಳನ್ನು ಪುಣ್ಯಕೋಟಿ ದತ್ತು ಯೋಜನೆಯಡಿ ಸೇರ್ಪಡೆ ಮಾಡಬೇಕು. ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ನಡೆಸಲಾಗುತ್ತಿರುವ ಗೋಶಾಲೆಯನ್ನು ಸೇರ್ಪಡೆ ಮಾಡಿಕೊಂಡು ಅಲ್ಲಿನ ಜಾನುವಾರುಗಳನ್ನು ಕೂಡ ದತ್ತು ನೀಡಲು ಹಾಗೂ ದತ್ತು ಪಡೆಯಲು ಅನುಕೂಲ ಕಲ್ಪಿಸಬೇಕು ಎಂದು ತಿಳಿಸಿದರು.

ಆ್ಯಪ್ ಮೂಲಕ ಸಮಗ್ರ ಮಾಹಿತಿಯನ್ನು ನೀಡಲಾಗುತ್ತಿದ್ದು, ಅದೇ ಮಾದರಿಯಲ್ಲಿ ಗೋಶಾಲೆಗಳಲ್ಲಿರುವ ಹಸು-ಕರು ದತ್ತು ಪಡೆಯುವವರ ಕುರಿತು ಆಯಾ ಜಾನುವಾರುಗಳ ಎದುರು ಫಲಕಗಳನ್ನು ಅಳವಡಿಸಬೇಕು. ಇದರಿಂದ ಇತರರಿಗೆ ಇದು ಪ್ರೇರಣೆಯಾಗಲಿದೆ ಎಂದರು.

ಗೋಶಾಲೆಯಲ್ಲಿ ಇರುವ ಜಾನುವಾರುಗಳ ಪೈಕಿ ಈಗಾಗಲೇ ದತ್ತು ಪಡೆಯಲಾಗಿರುವ ಜಾನುವಾರುಗಳ ಸಂಖ್ಯೆ, ದತ್ತು ಪಡೆಯಲು ಲಭ್ಯವಿರುವ ಜಾನುವಾರುಗಳ ಸಂಖ್ಯೆ ಮತ್ತಿತರ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಗೋಶಾಲೆ ಅಕೌಂಟ್ ಗಳಿಗೆ ಹೋಗುವ ದತ್ತು ಹಣ ಹಾಗೂ ಬಳಕೆ ಸಮರ್ಪಕವಾಗಿ ಬಳಕೆ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕ ಬ್ಯಾಂಕ್ ಖಾತೆ ನಿರ್ವಹಿಸಬೇಕು.

ಪ್ರತಿ ತಾಲ್ಲೂಕಿಗೆ ಒಂದು ಗೋಶಾಲೆ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರ ವ್ಯಾಪ್ತಿಯಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ಮತ್ತೊಂದು ಗೋಶಾಲೆ ನಿರ್ಮಾಣ ಮಾಡಲಾಗುತ್ತಿದ್ದು, ಅದನ್ನು ಕೂಡ ಪುಣ್ಯಕೋಟಿ ದತ್ತು ಯೋಜನೆಯಡಿ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು. ನಗರದಲ್ಲಿ ರಕ್ಷಿಸಲಾಗಿರುವ ಹಸುಗಳನ್ನು ಕೂಡ ನಿಯಮಾವಳಿ ಪ್ರಕಾರ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಇದಲ್ಲದೇ ನಗರದಲ್ಲಿ ಲಭ್ಯವಿರುವ ಕಡಿಮೆ ಜಾಗೆಯಲ್ಲಿ ಸುಸಜ್ಜಿತ ಗೋಶಾಲೆಗಳನ್ನು ನಿರ್ಮಿಸಲು ಸೂಕ್ತ ಯೋಜನೆಯನ್ನು ರೂಪಿಸಬೇಕು. ಮುಂಬರುವ ದಿನಗಳಲ್ಲಿ ಇಂತಹ ಗೋಶಾಲೆಗಳನ್ನು ಯೋಜನೆ ವ್ಯಾಪ್ತಿಯಡಿ ಸೇರಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ನಗರದಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ಜನರಿಗೆ ದತ್ತು ಪಡೆಯಲು ಅವಕಾಶ ಒದಗಿಸುವುದರ ಜತೆಗೆ ವಿವಿಧ ಸಂದರ್ಭದಲ್ಲಿ ನಾಗರಿಕರು ಗೋಶಾಲೆಗಳಿಗೆ ಭೇಟಿ ನೀಡಿ ಹಸುಗಳ ಮಹತ್ವ ಅರಿತುಕೊಳ್ಳಲು ಅನುಕೂಲ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ.

ಬೆಳಗಾವಿನಗರದಲ್ಲಿಶ್ವಾನಪಾರ್ಕ್:

ಗೋಶಾಲೆಗಳ ಮಾದರಿಯಲ್ಲಿ ಶ್ವಾನ ಪಾರ್ಕ್ ಕೂಡ ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ. ಶ್ವಾನ ಪ್ರದರ್ಶನ, ಚಿಕಿತ್ಸೆ ಹಾಗೂ ಶ್ವಾನಗಳನ್ನು ದತ್ತು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ತಿಳಿಸಿದರು.

ಶ್ವಾನ ಪಾರ್ಕ್ ಅನ್ನು ವೈಜ್ಞಾನಿಕ ರೀತಿಯಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಬೇಕು. ಶ್ವಾನ ಚಿಕಿತ್ಸೆ, ದತ್ತು, ಪ್ರದರ್ಶನ ಮತ್ತಿತರ ಚಟುವಟಿಕೆಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು. ಈ ಕುರಿತು ದೇಶದ ಮಹಾನಗರಗಳಲ್ಲಿ ಇರುವ ಇಂತಹ ಶ್ವಾನ ಪಾರ್ಕ್ ಗಳ ಅಧ್ಯಯನ ನಡೆಸಿ ಸಮಗ್ರವಾದ ಯೋಜನೆಯನ್ನು ರೂಪಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಸೂಚನೆ:

ನಗರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳನ್ನು ಕೂಡಲೇ ಬಂದ್ ಮಾಡಬೇಕು. ಒಂದು ವೇಳೆ ನಿಯಮಾವಳಿ ಪ್ರಕಾರ ಟ್ರೇಡ್ ಲೈಸೆನ್ಸ್ ನೀಡಲು ಸಾಧ್ಯವಿದ್ದರೆ ತಕ್ಷಣವೇ ಲೈಸೆನ್ಸ್ ನೀಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.

ಅದೇ ರೀತಿ ನಗರದ ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕು ಹಾಗೂ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಲೈಸೆನ್ಸ್ ಇಲ್ಲದೇ ಮಾಂಸ ಮಾರಾಟ ಅಂಗಡಿಗಳು ಕಂಡುಬಂದರೆ ಅವುಗಳನ್ನು ಬಂದ್ ಮಾಡಿಸಬೇಕು ಎಂದು ತಿಳಿಸಿದರು.

ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಜತೆ ಜಂಟಿಯಾಗಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಪರದೆಗಳನ್ನು ಅಳವಡಿಸಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಎಂದರು.

Read All News